Home ಜಿಲ್ಲೆ ಕಲಬುರಗಿ ಬಿಜೆಪಿ ಸಿದ್ಧಾಂತಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ವಿಚಾರಗಳೇ ಬುನಾದಿ: ವೀರಣ್ಣ ಯಾರಿ

ಬಿಜೆಪಿ ಸಿದ್ಧಾಂತಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ವಿಚಾರಗಳೇ ಬುನಾದಿ: ವೀರಣ್ಣ ಯಾರಿ

ವಾಡಿ: ಬಿಜೆಪಿಯ ಪೂರ್ವಾಶ್ರಮವಾದ ಭಾರತೀಯ ಜನಸಂಘದ ಮಾಜಿ ಅಧ್ಯಕ್ಷ, ಮಹಾನ್ ರಾಷ್ಟ್ರಭಕ್ತ ಹಾಗೂ ಪ್ರಖರ ರಾಜಕೀಯ ಚಿಂತಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ವಿಚಾರಗಳು ಮತ್ತು ಸಿದ್ಧಾಂತಗಳು ಭಾರತೀಯ ಜನತಾ ಪಕ್ಷದ ರಾಜಕೀಯ ಹಾಗೂ ವೈಚಾರಿಕತೆಗೆ ಭದ್ರ ಬುನಾದಿಯಾಗಿವೆ ಎಂದು ವಾಡಿ ಬಿಜೆಪಿ ಘಟಕದ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ೧೧೦ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ,ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಉಪಾಧ್ಯಾಯ ಅವರ ಪ್ರಮುಖ ಕೊಡುಗೆಗಳಲ್ಲಿ ಏಕಾತ್ಮ ಮಾನವತಾವಾದ ಅತ್ಯಂತ ಶ್ರೇಷ್ಠವಾದುದು. ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಅವರು ದೇಶದ ಬಡತನ ನಿರ್ಮೂಲನೆ ಮತ್ತು ಸ್ಥಳೀಯ ಆರ್ಥಿಕತೆಯ ಬಲವರ್ಧನೆಗೆ ಸದಾ ಒತ್ತು ನೀಡಿದ್ದರು.
ದೀನದಯಾಳ್ ಅವರು ತಮ್ಮ ಶ್ರೇಷ್ಠ ಬರಹಗಳ ಮೂಲಕ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಸಾರಿದ್ದರು. ರಾಷ್ಟ್ರಧರ್ಮ ಪತ್ರಿಕೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಯುವಜನತೆಯಲ್ಲಿ ದೇಶಭಕ್ತಿ ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಮೂಡಿಸಲು ನಿರಂತರ ಪ್ರಯತ್ನ ನಡೆಸಿದ್ದರು. ಇಂದು ಅವರ ತತ್ವ ಮತ್ತು ಆದರ್ಶಗಳೊಂದಿಗೆ ನಮ್ಮ ಪಕ್ಷವು ಅಧಿಕಾರಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನೇತೃತ್ವದಲ್ಲಿ ದೇಶವು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎಂದು ಉಪಾಧ್ಯಾಯ ಅವರ ದೇಶಸೇವೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಶರಣಗೌಡ ಚಾಮನೂರ, ಅಶೋಕ ಹರನಾಳ, ಅರ್ಜುನ ಕಾಳೆಕರ, ಅಶೋಕ ಪವಾರ, ರಿಚರ್ಡ್ ಮಾರೆಡ್ಡಿ, ಮಲ್ಲಿಕಾರ್ಜುನ ಸಾತಖೇಡ, ನಿರ್ಮಲಾ ಇಂಡಿ, ಯಂಕಮ್ಮ ಗೌಡಗಾಂವ, ಕುಮಾರ ಜಾಧವ, ರಾವುಲ ಹಳಗಿಕರ್, ಚಂದ್ರಾಮ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.