
ಚಿಕ್ಕಬಳ್ಳಾಪುರ,ಜು.೨೯: ಸರ್ಕಾರಿ ಶಾಲೆ ಮತ್ತು ವಸತಿ ಶಾಲೆಗಳಲ್ಲಿ ಕಲಿಕೆಗೆ ಅವಶ್ಯಕವಿರುವ ಅಗತ್ಯ ಸೌಲಭ್ಯಗಳ ಜೊತೆಗೆ ಗುಣಾತ್ಮಕ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡಿದಲ್ಲಿ ದೇಶದ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದರು.
ಗೌರಿಬಿದನೂರು ತಾಲೂಕು ವಿದುರಾಶ್ವತ್ಥದಲ್ಲಿನ ಕಸ್ತೂರಿಬಾ ಗಾಂಧೀಜಿ ಬಾಲಿಕಾ ವಿದ್ಯಾಲಯದಲ್ಲಿ ಹೊಂಗಿರಣ ಜನಸೇವಾ ಟ್ರಸ್ಟ್ ಮತ್ತು ಲಯನ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಶಕದ ಹಿಂದೆಯೇ ಈ ಭಾಗದ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಈ ವಸತಿ ಶಾಲೆಯನ್ನು ಆರಂಭಿಸಲಾಗಿದೆ.ತಾಲ್ಲೂಕು, ಜಿಲ್ಲೆ ಸೇರಿದಂತೆ ವಿವಿದೆಡೆಗಳಿಂದ ಬಾಲಕಿಯರು ಈ ವಸತಿ ಶಾಲೆಗೆ ದಾಖಲಾತಿ ಪಡೆದಿದ್ದಾರೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಟಿ.ಅಶ್ವತ್ಥರೆಡ್ಡಿ ಮಾತನಾಡಿ,ತಾಲ್ಲೂಕಿನ ಸರ್ಕಾರಿ ಶಾಲೆ ಮತ್ತು ವಸತಿ ಶಾಲೆಗಳ ನಿರ್ಮಾಣದಿಂದ ಎಲ್ಲ ವರ್ಗದ ಜನತೆಗೆ ಅಗತ್ಯ ಶಿಕ್ಷಣ ದೊರೆಯಲು ಸಾಧ್ಯವಾಗಿದೆ. ದಶಕದ ಹಿಂದೆಯೇ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮೂಡಿಸುವ ನಿಟ್ಟಿನಲ್ಲಿ ಎನ್.ಎಚ್.ಶಿವಶಂಕರ ರೆಡ್ಡಿ ಯವರು ಕೇಂದ್ರೀಯ ವಿದ್ಯಾಲಯ, ಜಿಟಿಟಿಸಿ ಕೇಂದ್ರ, ಆದರ್ಶ ವಿದ್ಯಾಲಯ, ಕೆಜಿಬಿವಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ಇನ್ನಿತರ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಶೈಕ್ಷಣಿಕ ಕ್ರಾಂತಿ ಮೂಡಿಸುವ ಮೂಲಕ ಇಡೀ ಜಿಲ್ಲೆಯಲ್ಲಿಯೇ ಗೌರಿಬಿದನೂರು ಹೊಸ ಅಧ್ಯಾಯ ಬರೆದಿದೆ. ವಿದ್ಯಾರ್ಥಿಗಳು ಇವುಗಳ ಜೊತೆಗೆ ದಾನಿಗಳು ನೀಡುವ ಸಹಕಾರವನ್ನು ಪಡೆದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಹೊಂಗಿರಣ ಜನಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ವಿ.ಲಕ್ಷ್ಮಿಸಾಗರ್ ಮಾತನಾಡಿ,ನನ್ನ ಸಮಾಜಮುಖಿ ಕಾರ್ಯಗಳಿಗೆ ಈ ಶಾಲೆಯ ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಅತ್ಯಲ್ಪವಾದ ಸಹಾಯವು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಕಲಿಕಾ ಸಾಮಗ್ರಿಗಳು ಅತ್ಯಂತ ಅಗತ್ಯವಿರುವ ವಿದ್ಯಾರ್ಥಿನಿಯರಿಗೆ ಸೇವಾ ಕಾರ್ಯಗಳ ಮೂಲಕ ನೆರವಾಗುವ ಸಾರ್ಥಕತೆ ದೊರೆತಿರುವುದು ನಿಜಕ್ಕೂ ಪುಣ್ಯದ ಕೆಲಸವಾಗಿದೆ ಎಂದು ಹೇಳಿದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಎ.ಎಸ್.ಜಗನ್ನಾಥ್ ಮಾತನಾಡಿ,ಹೊಂಗಿರಣ ಜನಸೇವಾ ಟ್ರಸ್ಟ್ ಮತ್ತು ಲಯನ್ಸ್ ಸಂಸ್ಥೆಯು ಒಟ್ಟಿಗೆ ಈ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವ ಪರಿಕರಗಳನ್ನು ನೀಡುವ ಮೂಲಕ ನೆರವಾಗಿದ್ದೇವೆ. ಇವುಗಳ ಸದ್ಬಳಕೆಯಿಂದ ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ಮಜಲುಗಳನ್ನು ಯಶಸ್ವಿಯಾಗಿ ಏರಬೇಕಾಗಿದೆ ಎಂದು ಹೇಳಿದರು.
ಈ ವೇಳೆ ನಿವೃತ್ತ ಪ್ರಾಂಶುಪಾಲ ಡಾ.ಕೆ.ಪಿ.ನಾರಾಯಣಪ್ಪ,ನಿವೃತ್ತ ಬೆಸ್ಕಾಂ ಅಧಿಕಾರಿ ಜೀಲಾಕುಂಟೆ ಗಂಗಾಧರಪ್ಪ,ಲಯನ್ಸ್ ಸಂಸ್ಥೆಯ ಸದಸ್ಯರಾದ ಜಿ.ಎನ್.ಸೂರಜ್, ಶಾಲೆಯ ಮುಖ್ಯ ಶಿಕ್ಷಕಿ ಪಿ.ಸಿ.ಪದ್ಮಲತ, ಸಹಶಿಕ್ಷಕಿಯರಾದ ಬಿ.ಎನ್.ಗೀತಾ, ಬಿ.ವಿ.ಜಯಮಾಲ, ಕೆ.ಎನ್.ಪೂರ್ಣಿಮಾ, ಶಬೀನಾ ಬಾನು,ಇಂದಿರಮ್ಮ, ಗಂಗಾದೇವಿ, ಉಮಾದೇವಿ, ಪಾವನಿ, ವರಲಕ್ಷ್ಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


































