
ಬೆಂಗಳೂರು,ಅ.೧೦- ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಮತ್ತೊಂದೆಡೆ, ಏಳು ಮಂದಿ ಕೈದಿಗಳನ್ನು ರಾಜ್ಯದ ಇತರೆ ಜೈಲುಗಳಿಗೆ ಸ್ಥಳಾಂತರಿಸಲು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಒಪ್ಪಿಗೆ ನೀಡಿದೆ.
ಸುಪ್ರೀಂ ಕೋರ್ಟ್‌ನ ಆದೇಶವನ್ನು ನಕಲು ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಶಂಕರ್‌ನನ್ನು ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯ ಉತ್ತರ ವಲಯದ ಡಿಐಜಿ ಸೋಮಶೇಖರ್ ಅವರನ್ನು ಬಂಧಿಸಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಪ್ರಜ್ವಲ್ ರೇವಣ್ಣನನ್ನು ಸದ್ಯಕ್ಕೆ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಏಳು ಕೈದಿಗಳ ಸ್ಥಳಾಂತರ:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ, ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಬಿಡುಗಡೆಯಾಗಲು ಯತ್ನಿಸಿದ್ದ ಕೈದಿ ಶಂಕರ್ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಆರೋಪ ಎದುರಿಸುತ್ತಿರುವ ಶ್ರೀಕಾಂತ್ ಸೇರಿದಂತೆ ಏಳು ಮಂದಿ ಕೈದಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲು ಈ ಹಿಂದೆ ಇಲಾಖೆ ನಿರ್ಧರಿಸಿತ್ತು.
ಆದರೆ, ನಕಲಿ ಆದೇಶ ಪ್ರಕರಣದಲ್ಲಿ ಉತ್ತರ ವಲಯದ ಡಿಐಜಿ ಸೋಮಶೇಖರ್ ಬಂಧನವಾಗಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣನ ಸ್ಥಳಾಂತರವನ್ನು ತಾತ್ಕಾಲಿಕವಾಗಿ ಮುಂದೂಡಲು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೈಲಿನಲ್ಲಿ ಮೊಬೈಲ್ ಪತ್ತೆ:
ಕಳೆದ ಆಗಸ್ಟ್ ೧೧ರಂದು ಡಿಸಿಪಿ ಹರಿಬಾಬು ಹಾಗೂ ಇಮಾಮ್ ಖಾಸೀಂ ನೇತೃತ್ವದ ಸಿಸಿಬಿ ಪೊಲೀಸರ ತಂಡ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಅಲ್ಲದೆ, ಮೊಬೈಲ್ ಚಾರ್ಜರ್, ನೋಟ್‌ಬುಕ್ ಹಾಗೂ ಪೆನ್‌ಡ್ರೈವ್ ಕೂಡ ದೊರೆತಿದ್ದವು.
ಪ್ರಜ್ವಲ್ ರೇವಣ್ಣ ಜೈಲಿನೊಳಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆ ಹಾಗೂ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಪ್ರಕರಣದ ಕುರಿತು ತನಿಖೆ ನಡೆಸಲು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿತ್ತು.
ಸರ್ಕಾರಕ್ಕೆ ಮುಜುಗರ:
ಜೈಲಿನೊಳಗೆ ಮೊಬೈಲ್ ಬಳಕೆಗೆ ಅವಕಾಶ ದೊರೆತಿರುವುದು ಇಲಾಖೆಗೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು.
ಇದೀಗ ನಕಲಿ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಕೈದಿಯೊಬ್ಬನನ್ನು ಬಿಡುಗಡೆ ಮಾಡಿದ ಪ್ರಕರಣದಲ್ಲಿ ಹಿರಿಯ ಅಧಿಕಾರಿಯ ಬಂಧನವಾಗಿರುವ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣನ ಜೈಲು ಸ್ಥಳಾಂತರ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.























