
ಜೇವರ್ಗಿ: ಅಕ್ಷರ ಕಲಿಸುವ ಶಿಕ್ಷಕ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ; ವಿದ್ಯಾರ್ಥಿಯ ಬದುಕಿಗೆ ದಿಕ್ಕು ತೋರಿಸುವ ಮಾರ್ಗದರ್ಶಕ, ಸಮಾಜದ ಭವಿಷ್ಯ ರೂಪಿಸುವ ಶಿಲ್ಪಿ. ಅಂತಹ ಶಿಕ್ಷಕರ ಸೇವೆಯನ್ನು ಸ್ಮರಿಸುವುದರೊಂದಿಗೆ, ಬರಗಾಲದಿಂದ ಸಂಕಷ್ಟಕ್ಕೊಳಗಾದ ರೈತರ ಬದುಕಿನ ನೋವು, ಹತಾಶೆ ಮತ್ತು ಆತ್ಮಸ್ಥೈರ್ಯಕ್ಕೆ ಕಾವ್ಯದ ಮೂಲಕ ಧ್ವನಿ ನೀಡಿದ ಅರ್ಥಪೂರ್ಣ ಕಾರ್ಯಕ್ರಮವೊಂದು ಜೇವರ್ಗಿಯಲ್ಲಿ ನಡೆಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಸಾರ್ಥಕ ಶಿಕ್ಷಕ ಪ್ರಶಸ್ತಿ ಹಾಗೂ “ಬರಗಾಲ ಬವಣೆ” ಕವಿಗೋಷ್ಠಿ’ ಕಾರ್ಯಕ್ರಮ ಸೆ.೨೬ರಂದು ಸಂಜೆ ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸೊನ್ನ ವಿರಕ್ತ ಮಠದ ಪೂಜ್ಯ ಶ್ರೀ ಡಾ. ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣದ ಮೌಲ್ಯ, ಶಿಕ್ಷಕರ ಜವಾಬ್ದಾರಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗುರುವಿನ ಪಾತ್ರ ಹಾಗೂ ಸಮಾಜಮುಖಿ ಶಿಕ್ಷಣದ ಅಗತ್ಯತೆಯ ಕುರಿತು ಗಣ್ಯರು ಹಾಗೂ ಸಾಹಿತಿಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ವಿದ್ಯಾರ್ಥಿಯ ಕೈಗೆ ಪುಸ್ತಕ ನೀಡುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ. ಉತ್ತಮ ಮೌಲ್ಯಗಳು, ಶಿಸ್ತು, ಮಾನವೀಯತೆ, ದೇಶಪ್ರೇಮ, ಸಾಮಾಜಿಕ ಜವಾಬ್ದಾರಿ ಹಾಗೂ ಜೀವನವನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸುವುದು ಶಿಕ್ಷಕರ ಮಹತ್ವದ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು.
ಒಬ್ಬ ಶಿಕ್ಷಕನ ಮಾತು ವಿದ್ಯಾರ್ಥಿಯ ಬದುಕಿನಲ್ಲಿ ವರ್ಷಗಳ ಕಾಲ ಪ್ರತಿಧ್ವನಿಸಬಹುದು. ತರಗತಿಯ ನಾಲ್ಕು ಗೋಡೆಗಳೊಳಗೆ ನೀಡುವ ಜ್ಞಾನವು ವಿದ್ಯಾರ್ಥಿಯ ವೈಯಕ್ತಿಕ ಬದುಕನ್ನು ಮಾತ್ರವಲ್ಲದೆ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಭವಿಷ್ಯವನ್ನೂ ರೂಪಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಶಿಕ್ಷಕರ ವೃತ್ತಿ ಒಂದು ಉದ್ಯೋಗಕ್ಕಿಂತಲೂ ಮಿಗಿಲಾದ ಸಾಮಾಜಿಕ ಜವಾಬ್ದಾರಿಯಾಗಿದೆ ಎಂಬ ಸಂದೇಶ ಕಾರ್ಯಕ್ರಮದಲ್ಲಿ ಮೂಡಿಬಂತು.
ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದ್ದು, ಇದೇ ಆಶಯದೊಂದಿಗೆ ವ ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕರಿಗೆ ‘ಸಾರ್ಥಕ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಬರಗಾಲದ ಬವಣೆ ಮತ್ತು ರೈತರ ಆತ್ಮಸ್ಥೈರ್ಯ’ ವಿಷಯಾಧಾರಿತ ಶಿಕ್ಷಕರ ಕವಿಗೋಷ್ಠಿ ಸುದೀರ್ಘವಾಗಿ ನಡೆಯಿತು.
ಮಳೆ ಕೈಕೊಟ್ಟಾಗ ಹೊಲ ಒಣಗುತ್ತದೆ; ಹೊಲ ಒಣಗಿದಾಗ ರೈತನ ಕನಸುಗಳು ಬಾಡುತ್ತವೆ. ಬಿತ್ತನೆಗೆ ಮಾಡಿದ ಸಾಲ, ಬೆಳೆಗಾಗಿ ಹಾಕಿದ ಶ್ರಮ, ಆಕಾಶದತ್ತ ನೋಡುವ ಕಣ್ಣುಗಳು, ಮಳೆಯ ನಿರೀಕ್ಷೆಯಲ್ಲಿ ಕಳೆಯುವ ದಿನಗಳು-ಬರಗಾಲ ರೈತನ ಬದುಕಿನ ಮೇಲೆ ಬೀರುವ ಪರಿಣಾಮವನ್ನು ಕವಿಗಳು ತಮ್ಮ ಕವನಗಳ ಮೂಲಕ ಸರ್ಕಾರಕ್ಕೆ ಮನಮುಟ್ಟುವಂತೆ ಕವನ ವಾಚನ ಮಾಡಿದರು.
ರೈತನ ನೋವನ್ನು ಕೇವಲ ಅಂಕಿ-ಅAಶಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಮಣ್ಣಿನೊಂದಿಗೆ ಬದುಕು ಕಟ್ಟಿಕೊಂಡಿರುವ ರೈತನಿಗೆ ಬೆಳೆ ಎಂದರೆ ಕೇವಲ ಉತ್ಪನ್ನವಲ್ಲ; ಅದು ಕುಟುಂಬದ ಭವಿಷ್ಯ, ಮಕ್ಕಳ ಶಿಕ್ಷಣ, ಬದುಕಿನ ಭರವಸೆ ಹಾಗೂ ಹಲವು ತಿಂಗಳ ಪರಿಶ್ರಮದ ಫಲ. ಈ ಭಾವನೆಗಳನ್ನು ಕವಿಗಳು ತಮ್ಮ ಕಾವ್ಯದಲ್ಲಿ ತೆರೆದಿಟ್ಟರು.
ಅದೇ ವೇಳೆ ಸಂಕಷ್ಟದ ನಡುವೆಯೂ ರೈತ ಕುಗ್ಗದೆ ಬದುಕನ್ನು ಎದುರಿಸಬೇಕು, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು, ಸಮಾಜವೂ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬ ಆಶಯವೂ ಕವಿಗೋಷ್ಠಿಯಲ್ಲಿ ಪ್ರತಿಧ್ವನಿಸಿತು.
ಕವಿಗೋಷ್ಠಿಯಲ್ಲಿ ಶಿಕ್ಷಕ ಕವಿಗಳು ಬರಗಾಲ, ರೈತರ ಬದುಕು, ಮಳೆಯ ನಿರೀಕ್ಷೆ, ಕೃಷಿ ಸಂಕಷ್ಟ, ಗ್ರಾಮೀಣ ಜೀವನ ಹಾಗೂ ಸಾಮಾಜಿಕ ಬದಲಾವಣೆಗಳ ಕುರಿತು ಕವನಗಳನ್ನು ವಾಚಿಸಿದರು. ಕೆಲ ಕವನಗಳು ರೈತನ ಕಣ್ಣೀರಿನ ನೋವನ್ನು ಕಟ್ಟಿಕೊಟ್ಟರೆ, ಇನ್ನು ಕೆಲವು ಕವನಗಳು ಸಂಕಷ್ಟದ ನಡುವೆಯೂ ಬದುಕನ್ನು ಕಟ್ಟಿಕೊಳ್ಳುವ ರೈತನ ಧೈರ್ಯವನ್ನು ಬಿಂಬಿಸಿದವು.
ಕವಿಗೋಷ್ಠಿಯ ಮೂಲಕ ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜದ ನೋವಿಗೆ ಧ್ವನಿಯಾಗಬಲ್ಲ ಶಕ್ತಿಯಾಗಿದೆ ಎಂಬ ಸಂದೇಶವೂ ಮೂಡಿಬಂತು.
ಉಪನ್ಯಾಸಕರಾಗಿ ಕಲಬುರಗಿಯ ಸಂಸ್ಕೃತ ಪ್ರಾಧ್ಯಾಪಕ ಡಾ. ಲಕ್ಷ್ಮೀಕಾಂತ ವಿ. ಮೊಹರೀರ ಹಾಗೂ ಪ್ರಾಧ್ಯಾಪಕ ಪ್ರೊ. ಶಾಂತಪ್ಪ ಡಂಬಳ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕದಳಿ ವೇದಿಕೆ ಜೇವರ್ಗಿ,ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು,ಕಸಾಪ ಜೇವರ್ಗಿ ತಾಲೂಕು ಹಾಗೂ ನಗರ ಘಟಕ ಜೇವರ್ಗಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಬಳುಂಡಗಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಟಿಎಪಿಸಿಎಂಎಸ್ ಅಧ್ಯಕ್ಷ ಭಗವಂತ್ರಾಯಗೌಡ ಕೆ. ಪಾಟೀಲ, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಹಕಾರ್ಯದರ್ಶಿ ದೇವಿಂದ್ರ ಎಸ್. ಬಿರಾದಾರ, ತಾಲೂಕು ರೆಡ್‌ಕ್ರಾಸ್ ಸಂಘದ ಅಧ್ಯಕ್ಷ ಡಾ. ಪಿ.ಎಂ. ಮಠ, ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಡಾ. ದೇವಿಂದ್ರ ಗುಡೂರ, ಜೇವರ್ಗಿ ಪಿಎಸ್‌ಐ ಮಹಿಬೂಬ ಅಲಿ, ಮಮತಾ ಸುರೇಶ ಬಾಬು ಸಜ್ಜನ, ಬಿಎಪಿಸಿಎಂಎಸ್ ಉಪಾಧ್ಯಕ್ಷ ಮಹಿಮೂದ್ ನೂರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಶೇಷ ಸತ್ಕಾರದಲ್ಲಿ ನಿವೃತ್ತ ಬಿಎಸ್‌ಎಫ್ ಯೋಧ ಖಾಜಾ ಪಟೇಲ್ ಹಾಗೂ ಚಂದ್ರಕಾAತ ರಾಮಣ್ಣ ಕೋರಿಶೆಟ್ಟಿ ಅವರನ್ನು ಗೌರವಿಸಲಾಯಿತು.
ಕವಿಗೋಷ್ಠಿಯಲ್ಲಿ ಶ್ರೀಮತಿ ಸುಧಾ ಬಿ. ಬೆಣ್ಣೂರ, ಮಲ್ಲಣ್ಣ ಚನ್ನಮಲ್ಲಪಗೋಳ, ಜಗದೀಶ ನೇದಲಗಿ, ಶ್ರೀಮತಿ ಕಲಾವತಿ ಎಸ್.ಟಿ., ಅರ್ಜುನ ಬಿ. ನಾಕಮಾನ್, ಮಹಾಂತೇಶ ಪಾಟೀಲ ಯಾತನೂರ, ಸರೋಜನಿ ಎಸ್. ಹಠಮನಿ, ಶ್ವೇತಾ ಪ್ರಶಾಂತ ಜಮಖಂಡಿ ಬೇಲೂರ, ಮಲ್ಲಿಕಾರ್ಜುನ ಚೌಡಿಯಾಳ ಹಾಗೂ ತುಕಾರಾಮ ಎ.ಎಸ್.ಐ. ಜೇವರ್ಗಿ ಸೇರಿದಂತೆ ಶಿಕ್ಷಕ ಕವಿಗಳು ಭಾಗವಹಿಸಿ ಕವನಗಳನ್ನು ವಾಚಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಕವಿತಾ ಹಳ್ಳಿ ನಿರ್ವಹಿಸಿದರು. ನಿರ್ವಹಣೆಯನ್ನು ಭಗವಂತ್ರಾಯ ಶಿವಣ್ಣಕರ್ ಹಾಗೂ ಸಿದ್ದು ಕೇರೂರ ವಹಿಸಿದ್ದರು.
……………………………………….
೨೦೨೬ನೇ ಸಾಲಿನ ಸಾರ್ಥಕ ಶಿಕ್ಷಕರ ಪ್ರಶಸ್ತಿಗೆ ಭಾಜನರಾದವರು
ಈಚನಾಳ ಡಾ. ಖಾಜಾವಲಿ,ಶ್ರೀಮತಿ ವೀಣಾ ಅಲಗೂಡಕರ್, ಡಾ. ಹಣಮಂತ್ರಾಯ ಎಸ್. ರಾಂಪೂರೆ,ರಾಮನಗೌಡ ಎಸ್. ಮಣೂರ, ಶಿವಾನಂದ ಎಸ್. ಬಡದಾಳ,ಸಂತೋಷ ಹಿರೇಮಠ,ವಿದ್ಯಾಸಾಗರ ಎಸ್. ಚೂಲ,ಹಣಮಂತ ಚಾಂದುರೆ,ಶ್ರೀಮತಿ ಗೀತಾ ಎಸ್. ಅವರಾದ,ಶ್ರೀಮತಿ ನಂದಿನಿ ಬಿರಾದಾರ,ಶ್ರೀಮತಿ ಗೀತಾ ಬಿ.ಡಿ,ಶ್ರೀಮತಿ ಕುಸಮಾ ಶರಣಪ್ಪ ಜೇವರ್ಗಿ,ರಾಜೇಂದ್ರಕುಮಾರ ಎಂ. ಮಠ,ಸುರೇಶಕುಮಾರ ಹಿರೇಮಠ,ಶ್ರೀಮತಿ ಶೃತಿ ಶರಣಪ್ಪ,ಯಮನಪ್ಪ ಡಿ. ಬಡದಾಳ,ಬಸವರಾಜ ಸ.ಶಿ. ಯಂಕAಚಿ,ಬಾಬುಗೌಡ ಎಸ್.ಪಾಟೀಲ ಜೇರಟಗಿ,ರಮೇಶ ಬಿರಾದಾರ ನೇದಲಗಿ,ಗೊಲ್ಲಾಳಪ್ಪ ಅರಳಗುಂಡಗಿ ಸೈದಾಪೂರ,
ಸೂರ್ಯಕಾಂತ ಎಸ್. ಬಂಡಿ ಹರನೂರ,ಚಿನ್ನುಪಟೇಲ್ ಕಮಲ ಪಟೇಲ ಜೇವರ್ಗಿ
ಕಾರ್ಯಕ್ರಮದ ಯಶಸ್ಸಿಗೆ ಕಸಾಪ ತಾಲೂಕು ಘಟಕದ ಗೌರವ ಅಧ್ಯಕ್ಷ ಚನಮಲ್ಲಯ್ಯ ಹಿರೇಮಠ ಹುಲ್ಲೂರ, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಸಂಗಯ್ಯ ಸ್ವಾಮಿ ಹಿರೇಮಠ, ಅಧ್ಯಕ್ಷ ಅಬ್ದುಲ್ ರೆಹಮಾನ್ ಪಟೇಲ್, ಕಾರ್ಯಾಧ್ಯಕ್ಷರಾದ ಶ್ಯಾಮರಾಯಗೌಡ ಪಾಟೀಲ ಕೋಳಕೂರ,ಶರಣಗೌಡ ಪಾಟೀಲ್ ಜೈನಾಪೂರ ಕಾರ್ಯಕ್ರಮದ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಕಸಾಪ ಜೇವರ್ಗಿ ಘಟಕದ ಉಪಾಧ್ಯಕ್ಷ ಹಾಗೂ ಉಪನ್ಯಾಸಕರಾದ ಡಾ.ಹಣಮಂತ್ರಾಯ ರಾಂಪೂರೆ ನಿರೂಪಣೆ ಮಾಡಿ ವಂದನಾರ್ಪಣೆಯನ್ನು ಸಲ್ಲಿಸಿದರು.ಜಗದೀಶ ಬಿ. ವಿಶ್ವಕರ್ಮ, ತಾಲೂಕು ಅಧ್ಯಕ್ಷ ಎಸ್.ಕೆ. ಬಿರಾದಾರ, ಗೌರವ ಕಾರ್ಯದರ್ಶಿಗಳಾದ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ ಹಾಗೂ ಶ್ರೀಹರಿ ಎಸ್. ಕರಕಳ್ಳಿ,ಕೋಶಾಧ್ಯಕ್ಷ ಎಸ್.ಎ. ಪಡಶೆಟ್ಟಿ, ಸಂಪಾದಕ ಚಂದ್ರಶಾಗೌಡ ಮಾಲಿ ಪಾಟೀಲ್,ವಿಕಾಸ ಯಲಗೋಡ್,ಪರಮಾನಂದ ಯಲಗೋಡ್, ಸಿದ್ದು ಸೊನ್ನ ಸೇರಿದಂತೆ ಪದಾಧಿಕಾರಿಗಳು ಹಾಗೂ ಸ್ವಾಗತ ಸಮಿತಿ ಸದಸ್ಯರು ಸಹಕರಿಸಿದರು.























