Home ಮುಖಪುಟ ಸುದ್ದಿ ಸುವೇಂದು ಸಂಪುಟ ವಿಸ್ತರಣೆ: ೩೫ ಸಚಿವರ ಪ್ರಮಾಣ ವಚನ

ಸುವೇಂದು ಸಂಪುಟ ವಿಸ್ತರಣೆ: ೩೫ ಸಚಿವರ ಪ್ರಮಾಣ ವಚನ

ಕೋಲ್ಕತ್ತಾ, ಜೂ.೧- ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸಚಿವ ಸಂಪುಟ ವಿಸ್ತರಿಸಿದ್ದು ಸ್ವಪನ್ ದಾಸ್ ಗುಪ್ತ, ಗೌರಿ ಶಂಕರ್ ಘೋಷ್, ಮನೋಜ್ ಕುಮಾರ್ ಒರಾನ್, ಅರ್ಜುನ್ ಸಿಂಗ್, ಸಕರ್ ಘೋಷ್ ಸೇರಿದಂತೆ ೩೫ ಶಾಸಕರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಟಿಎಂಸಿ ಮಾಜಿ ನಾಯಕ ಅರ್ಜುನ್ ಸಿಂಗ್, ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ, ಬಿಜೆಪಿ ನಾಯಕಿ ಮತ್ತು ನಟಿ ರೂಪಾ ಗಂಗೂಲಿ,ದೀಪಕ್ ಬರ್ಮನ್, ಜಗನ್ನಾತ್ ಚಟ್ಟೋಪಾದ್ಯಾಯ, ಕಲ್ಯಾಣ್ ಚಕ್ರವರ್ತಿ, ತೃಣಮೂಲ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ತಪಸ್ ರಾಯ್ ಪ್ರಮಾಣವಚನ ಸ್ವೀಕರಿಸಿದರು

ಲೋಕ ಭವನದಲ್ಲಿ ಇಂದು ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್.ರವಿ ನೂತನ ಸಚಿವರಿಗೆ ಪ್ರಮಾಣ ವಚನ ಮತ್ತು ಗೌಪ್ಯತೆ ಬೋಧಿಸಿದರು. ಹಲವು ಪ್ರಮುಖ ರಾಜಕೀಯ ಪ್ರಮುಖರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಅವರ ಸಚಿವ ಸಂಪುಟ ಅನುಭವಿ ಶಾಸಕರು ಮತ್ತು ಮೊದಲ ಬಾರಿಗೆ ಶಾಸಕರ ಮಿಶ್ರಣ ಹೊಂದಿದೆ

ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ ೧೫ ವರ್ಷಗಳ ಆಡಳಿತ ಕೊನೆಗೊಳಿಸಿ ಮೇ, ೯ ರಂದು ಬಿಜೆಪಿಯ ನಾಯಕ ಸುವೇಂಧು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಜೊತೆಗೆ ಐವರು ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಇಂದು ಮತ್ತೆ ೩೫ ಮಂದಿ ಸಚಿವರಾಗಿದ್ದು ರಾಜ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ, ಪಕ್ಷ ಐತಿಹಾಸಿಕ ರಾಜಕೀಯ ಪ್ರಗತಿ ಸಾಧಿಸಿರುವ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತಾತ್ಮಕ ಆದ್ಯತೆಗಳು, ಪ್ರಾದೇಶಿಕ ಸಮತೋಲನ ಮತ್ತು ಅಧಿಕಾರ ಹಂಚಿಕೆ ಸೂತ್ರದ ಮೊದಲ ಸ್ಪಷ್ಟ ಸೂಚನೆಗೆ ಪ್ರತೀಕವಾಗಿದೆ

೨೯೪ ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ರಾಜ್ಯ ಸಚಿವ ಸಂಪುಟ ೪೪ ಸದಸ್ಯರನ್ನು ಹೊಂದುವ ಸಾಮರ್ಥ್ಯ ಹೊಂದಿದೆ. ಇಂದು ೩೫ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವುದೂ ಸೇರಿದಂತೆ ಒಟ್ಟು ೪೦ ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇನ್ನೂ ನಾಲ್ಕು ಸ್ಥಾನ ಖಾಲಿ ಉಳಿದಿವೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರಾಜ್ಯ ಸರ್ಕಾರದ ಎರಡು ಪ್ರಮುಖ ಖಾತೆಗಳಾದ ಗೃಹ ಮತ್ತು ಗುಡ್ಡಗಾಡು ವ್ಯವಹಾರಗಳ ಖಾತೆಗಳ ಉಸ್ತುವಾರಿ ಉಳಿಸಿಕೊಂಡಿದ್ದಾರೆ. ಗೃಹ ಇಲಾಖೆಯನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊಂದಿದ್ದರು, ಅವರು ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಪ್ರಮುಖ ಸಚಿವಾಲಯಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಸುವೇಂಧು ಅಧಿಕಾರಿಯೂ ತಮ್ಮ ಬಳಿ ಪ್ರಮುಖ ಖಾತೆಗಳನ್ನು ಇಟ್ಟುಕೊಂಡಿದ್ದಾರೆ.