Home ಮುಖಪುಟ ಸುದ್ದಿ ಆರು ಮಂದಿ ಹತ್ಯೆ೧೨ ಮಂದಿ ಹಂತಕರ ಸೆರೆ

ಆರು ಮಂದಿ ಹತ್ಯೆ೧೨ ಮಂದಿ ಹಂತಕರ ಸೆರೆ

ಬೆಂಗಳೂರು,ಜೂ.೧-ವಿಜಯಪುರ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ಐದು ಮಂದಿ ಸೇರಿ ಆರು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ೧೨ ಮಂದಿ ಆರೋಪಿಗಳನ್ನು ಚಡಚಣ ಪೊಲೀಸರು ಬಂಧಿಸಿದ್ದಾರೆ.


ಬಂಧಿತ ೧೨ ಮಂದಿ ಆರೋಪಿಗಳನ್ನು ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕಸ್ಟಡಿಗೆ ತೆಗೆದುಕೊಂಡು ಪೋಲಿಸರು ವಿಚಾರಣೆ ಕೈಗೊಂಡಿದ್ದಾರೆ. ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಗೋವಿಂದ ಪುರದಲ್ಲಿ ಕಳೆದ ಮೇ.೨೯ರಂದು ಸಂಜೆ ನಡೆದ ಭೀಕರ ಆರು ಮಂದಿಯ ಹತ್ಯಾಕಾಂಡ ನಡೆದಿತ್ತು.


ಮಹರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ್ ತಾಲ್ಲೂಕಿನ ಕೂಡ್ಲಾ ಗ್ರಾಮದಲ್ಲಿ ಮುಂಜಾನೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಐಜಿಪಿ ಸಂದೀಪ್ ಪಾಟೀಲ್ ಹೇಳಿದರು.


ಘಟನೆಯಲ್ಲಿ ಹಂತಕರಿಂದ ಇಬ್ಬರು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಕರಣ ದಾಖಲಿಸಿದ್ದ ಚಡಚಣ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಗ್ರಾಮದಲ್ಲಿ ವಾತಾವರಣ ತಹಬದಿಗೆ ಬಂದಿರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ವಾಪಸು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.