Home ಜಿಲ್ಲೆ ಬೀದರ್ ಉತ್ತರ ಕ್ಷೇತ್ರದಲ್ಲಿಯೇ ಅಂದಾಜು 40 ಸಾವಿರ ನಕಲಿ ಮತದಾರರಿರುವ ಶಂಕೆ: ನಾಗಮಾರಪಳ್ಳಿ

ಬೀದರ್ ಉತ್ತರ ಕ್ಷೇತ್ರದಲ್ಲಿಯೇ ಅಂದಾಜು 40 ಸಾವಿರ ನಕಲಿ ಮತದಾರರಿರುವ ಶಂಕೆ: ನಾಗಮಾರಪಳ್ಳಿ

ಬೀದರ್: ಜು.29:ಬೀದರ್ ಉತ್ತರ ಕ್ಷೇತ್ರವೊಂದರಲ್ಲಿಯೇ ಅಂದಾಜು 40,000 ನಕಲಿ ಮತದಾರರಿರುವ ಶಂಕೆ ಇದೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ಜೆಡಿಎಸ್ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈಗಾಗಲೆ 21,000 ನಕಲಿ ಮತದಾರರನ್ನು ಪತ್ತೆ ಹಚ್ಚಲಾಗಿ ಅವರೆಲ್ಲರ ವಿವರನ್ನು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದರು.
ಎಸ್.ಆಯ್.ಆರ್ ಅಭಿಯಾನವು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಅತ್ಯಂತ ಮಹತ್ವದ ಕಾರ್ಯವಾಗಿದ್ದು, ಅರ್ಹ ಮತದಾರರ ಹೆಸರು ಸೇರ್ಪಡೆ ಹಾಗೂ ಅನರ್ಹರ ಹೆಸರುಗಳನ್ನು ತೆಗೆದು ಹಾಕುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿರುವುದು ಸಂತೋಷ ಎಂದು ತಿಳಿಸಿದರು.
ಅನರ್ಹ ಮತದಾರರ ಹೆಸರುಗಳು ಚುನಾವಣೆಯ ಪಾರದರ್ಶಕತೆಗೆ ಧಕ್ಕೆ ಉಂಟು ಮಾಡುತ್ತವೆ ಎಂದು ಅವರು ಆರೋಪಿಸಿದರು.
ತೆಲಂಗಾಣದ ಜಹೀರಾಬಾದ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೆಲವು ನಿವಾಸಿಗಳು ಕರ್ನಾಟಕ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದು, ಚುನಾವಣೆ ವೇಳೆ ಬೀದರ್‍ಗೆ ಬಂದು ಮತ ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಬೀದರ್ ನಗರದಲ್ಲಿಯೇ ಕೆಲವು ವ್ಯಕ್ತಿಗಳು ಎರಡು ಬೇರೆ ಮತಗಟ್ಟೆಗಳಲ್ಲಿ ಅಥವಾ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಪ್ರತ್ಯೇಕ ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಪ್ರಕರಣಗಳಿವೆ ಎಂದು ಹೇಳಿದರು.
ಪ್ರಸ್ತುತ ನಡೆಯುತ್ತಿರುವ ಎಸ್.ಆಯ್.ಆರ್ ಅಭಿಯಾನದಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳು ದಾಖಲೆಗಳ ಸಮರ್ಪಕ ಪರಿಶೀಲನೆ ಹಾಗೂ ಮತದಾರರ ನೈಜ ವಾಸಸ್ಥಳದ ದೃಢೀಕರಣವನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಇಲ್ಲದಿದ್ದರೆ ಅನರ್ಹರ ಹೆಸರುಗಳು ಮತದಾರರ ಪಟ್ಟಿಯಲ್ಲಿಯೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೊರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬೀದರ್‍ಗೆ ಬಂದಿರುವ ಕೆಲವರ ಹೆಸರುಗಳನ್ನೂ ಮತದಾರರ ಪಟ್ಟಿಗೆ ಸೇರಿಸಿರುವ ಆರೋಪವಿದ್ದು, ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಹಾಗೂ ಇತರ ಅನರ್ಹರ ಹೆಸರುಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ಕೆಲವು ವಿದ್ಯಾರ್ಥಿಗಳು ಹಾಗೂ ಮೃತ ವ್ಯಕ್ತಿಗಳ ಹೆಸರಿನಲ್ಲಿಯೂ ಮತದಾನ ನಡೆದಿರುವ ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ಹೇಳಿದರು.
ಬೀದರ್ ಉತ್ತರ ವಿಧಾನಸಭೆ ಕ್ಷೇತ್ರವನ್ನು ಅತಿ ಸೂಕ್ಷ್ಮ ಕ್ಷೇತ್ರವೆಂದು ಪರಿಗಣಿಸಿ ವಿಶೇಷ ನಿಗಾ ವಹಿಸಬೇಕು. ಎಸ್.ಆಯ್.ಆರ್ ಅಭಿಯಾನವನ್ನು ಪಾರದರ್ಶಕವಾಗಿ ಜಾರಿಗೊಳಿಸಿ, ಅನರ್ಹ ಮತದಾರರ ಹೆಸರುಗಳನ್ನು ತೆರವುಗೊಳಿಸುವ ಮೂಲಕ ಶುದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು, ನಕಲಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಶಾಶ್ವತವಾಗಿ ತೆರವುಗೊಳಿಸಬೇಕಾದರೆ ಆಧಾರ ಕಡ್ಡಾಯಗೊಳಿಸಬೇಕು. ಅದರಲ್ಲೂ ಬೈಮೆಟ್ರಿಕ್ ಪದ್ದತಿ ಕಟ್ಟು ನಿಟ್ಟಾಗಿ ಜಾರಿಯಾಗಬೇಕು ಎಂದು ನಾಗಮಾರಪಳ್ಳಿ ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ, ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಎಸ್.ಎಸ್.ಎಸ್.ಕೆ ನಿರ್ದೇಶಕರಾದ ಬಾಲಾಜಿ ಚೌಹಾಣ, ಸಂಜು ಸಿದ್ದಾಪುರ, ಜೆಡಿಎಸ್ ಮುಖಂಡರಾದ ಶಾಂತಲಿಂಗ ಸಾವಳಗಿ, ಬಸವರಾಜ ಪಾಟೀಲ ಹಾರೂರಗೇರಿ, ರಾಜಕುಮಾರ ಕಡ್ಯಾಳ, ವಿಜಯಕುಮಾರ ಆನಂದೆ, ಲಲಿತಾ ಕರಂಜಿ, ಬಮಗೊಂಡ ಚಿಟ್ಟಾ, ಮಹಾನಗರ ಪಾಲಿಕೆ ಸದಸ್ಯರಾದ ಎಮ್.ಡಿ ದಾವುದ್, ನವಾಜ್ ಖಾನ್ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.