Home ಜಿಲ್ಲೆ ಬೆಂಗಳೂರು ಕಲಬುರಗಿಯಲ್ಲಿ ಶಂಕಿತ ಉಗ್ರನ ಬಂಧನ

ಕಲಬುರಗಿಯಲ್ಲಿ ಶಂಕಿತ ಉಗ್ರನ ಬಂಧನ

ಬೆಂಗಳೂರು,ಅ.೧೮-ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಪಶ್ಚಿಮ ಬಂಗಾಳ ಮೂಲದ ಶಂಕಿತನನ್ನು ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದಲ್ಲಿ ಕಾರ್ಯಾಚರಣೆ ಕೈಗೊಂಡು ಕಲಬುರಗಿಯಲ್ಲಿ ಬಂಧಿಸಲಾಗಿದೆ.


ಬಂಧಿಸಿರುವ ಶಂಕಿತ ಮಮ್ತಾಜ್‌ವುಲ್ ಮಲೀಕ್ ನನ್ನು ತೀವ್ರ ವಿಚಾರಣೆ ನಡೆಸಲಾಗಿದೆ,ಆತಕಲಬುರಗಿಯ ಸರಾಫ್ ಬಜಾರ್‌ನಲ್ಲಿ ಸಹೋದರನೊಂದಿಗೆ ಚಿನ್ನಾಭರಣ ತಯಾರಿಸುವ ಕೆಲಸ ಮಾಡುತ್ತಿದ್ದು,ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.


ಮಮ್ತಾಜ್‌ವುಲ್ ಮಲೀಕ್ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆಯ ಸಂಪರ್ಕದಲ್ಲಿದ್ದು, ಸಂದೇಶಗಳ ಮೂಲಕ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಹಾಗೂ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಇತ್ತೀಚೆಗಷ್ಟೇ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಯುವಕನನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಕಲಬುರಗಿಯಲ್ಲಿ ಮತ್ತೊಬ್ಬ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿರುವುದು ಗಮನ ಸೆಳೆದಿದೆ.


೭ ಮಂದಿ ವಿರುದ್ಧ ಎಫ್‌ಐಆರ್:
ಪಾಕಿಸ್ತಾನ ಮೂಲದ ಘೋಷಿತ ಉಗ್ರ ಶಹಜಾದ್ ಭಟ್ಟಿ ಹಾಗೂ ಇತರರೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯಣಕೂರ ಗ್ರಾಮದ ವಿಶಾಲ್ ಮೇತ್ರೆ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಂಧಿಸಿತ್ತು.


ಈ ಪ್ರಕರಣದಲ್ಲಿ ವಿಶಾಲ್ ಮೇತ್ರೆ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆರೋಪಿಗಳು ಪಾಕಿಸ್ತಾನ ಮೂಲದ ಉಗ್ರರ ಜಾಲದೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಶಂಕೆ ವ್ಯಕ್ತವಾಗಿತ್ತು.


ವಿಶಾಲ್ ಮೇತ್ರೆ ವಾಟ್ಸ್‌ಆ?ಯಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ ಹಾಗೂ ರಾಣಾ ಹುನೇನ್ ಎಂಬುವವರೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಅಲ್ಲದೆ, ಅಕ್ರಮ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಸಾಗಣೆ ಕುರಿತು ಚರ್ಚೆ ನಡೆಸಿದ್ದ ಆರೋಪವೂ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿತ್ತು.


ಪೇಂಟರ್ ಸೋಗಿನಲ್ಲಿ ಸೆರೆ:
೨೦೨೬ರ ಜೂನ್‌ನಲ್ಲಿ ಉತ್ತರ ಪ್ರದೇಶ ಮೂಲದ ೨೦ ವರ್ಷದ ಸುಹೇಲ್ ಎಂಬಾತನನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗ್ರಾಮವೊಂದರಲ್ಲಿ ಬಂಧಿಸಲಾಗಿತ್ತು.

ಪೇಂಟರ್ ಸೋಗಿನಲ್ಲಿ ತಲೆಮರೆಸಿಕೊಂಡಿದ್ದ ಈತ, ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹಾಗೂ ವಿದೇಶಿ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದು, ಆನ್‌ಲೈನ್ ಮೂಲಕ ಉಗ್ರಗಾಮಿ ಚಟುವಟಿಕೆಗಳಿಗೆ ಪ್ರೇರಿತನಾಗಿದ್ದ ಎಂಬ ಆರೋಪ ಕೇಳಿಬಂದಿತ್ತು.


ಎನ್‌ಐಎ ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಆತನನ್ನು ಬಂಧಿಸಲಾಗಿತ್ತು ಎಂದು ವರದಿಯಾಗಿದೆ.


ಕಾರ್ಯಾಚರಣೆ ತೀವ್ರ:
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳ ವಿರುದ್ಧ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಕಲಬುರಗಿಯಲ್ಲಿ ವಶಕ್ಕೆ ಪಡೆದಿರುವ ವ್ಯಕ್ತಿಯ ವಿಚಾರಣೆಯಿಂದ ಮತ್ತಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ.