
ನವದೆಹಲಿ,ಮೇ೨೭: ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಮತದಾರರ ಪಟ್ಟಿಗಳ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಇರುವ ಕಾನೂನಾತ್ಮಕ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ. ಚುನಾವಣಾ ಆಯೋಗದ ಈ ಕ್ರಮವು ಮುಕ್ತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಆಶಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಬಿಹಾರದಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸಲು ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಸವಾಲು ಮಾಡಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.
ತೀರ್ಪು ಪ್ರಕಟಿಸಿ ಮಾತನಾಡಿದ ಸಿಜೆಐ ಸೂರ್ಯ ಕಾಂತ್, “ವಿಶೇಷ ಕಾರಣಗಳನ್ನು ದಾಖಲಿಸಿ, ತನಗೆ ಸೂಕ್ತವೆನಿಸುವ ರೀತಿಯಲ್ಲಿ ಯಾವುದೇ ಸಮಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲು ಕಾನೂನಿನಲ್ಲೇ ಅವಕಾಶವಿದೆ. ಸಾಂವಿಧಾನಿಕ ವಿಧಿ ೩೨೪ ಮತ್ತು ಜನಪ್ರತಿನಿಧಿ ಕಾಯ್ದೆ ೧೯೫೦ರ ಸೆಕ್ಷನ್ ೨೧(೩)ರ ಅಡಿಯಲ್ಲಿ ಆಯೋಗಕ್ಕೆ ಈ ಅಧಿಕಾರವಿದೆ. ಹೀಗಾಗಿ ಆಯೋಗವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಕೆಲಸ ಮಾಡಿದೆ ಎನ್ನಲಾಗದು” ಎಂದು ಸ್ಪಷ್ಟಪಡಿಸಿದರು.
“ಕೇವಲ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವುದು ಮಾತ್ರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲ. ಮತದಾರರ ಪಟ್ಟಿಯ ನಿಖರತೆ, ವಿಶ್ವಾಸಾರ್ಹತೆ ಹಾಗೂ ಪಾವಿತ್ರ್ಯತೆಯೇ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಕಳೆದ ನಾಲ್ಕು ದಶಕಗಳಿಂದ ಇಂತಹ ತೀವ್ರ ಪರಿಷ್ಕರಣೆ ನಡೆದಿರಲಿಲ್ಲ. ನಗರೀಕರಣ ಮತ್ತು ವಲಸೆಯಿಂದಾಗಿ ಮತದಾರರ ಹೆಸರುಗಳು ದುಪ್ಪಟ್ಟಾಗುವ ಸಾಧ್ಯತೆ ಇರುವುದರಿಂದ ಆಯೋಗ ಕೈಗೊಂಡಿರುವ ಈ ಕ್ರಮ ನ್ಯಾಯಸಮ್ಮತವಾಗಿದೆ” ಎಂದು ಕೋರ್ಟ್ ಹೇಳಿದೆ.
ಅರ್ಜಿದಾರರ ವಾದವೇನು
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ರಾಜಕೀಯ ಕಾರ್ಯಕರ್ತ ಯೋಗೇಂದ್ರ ಯಾದವ್, ಸಂಸದರಾದ ಮಹುವಾ ಮೊಯಿತ್ರಾ, ಮನೋಜ್ ಝಾ, ಕೆ.ಸಿ. ವೇಣುಗೋಪಾಲ್, ಸುಪ್ರಿಯಾ ಸುಳೆ ಸೇರಿದಂತೆ ಹಲವರು ಈ ಪ್ರಕ್ರಿಯೆಯನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಇದು ಚುನಾವಣಾ ಆಯೋಗದ ಮೂಲಕ ಕದ್ದುಮುಚ್ಚಿ ನಡೆಸುತ್ತಿರುವ ಪೌರತ್ವ ಪರಿಶೀಲನೆ ಪ್ರಕ್ರಿಯೆಯಾಗಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿರುವ ನಾಗರಿಕರು ಮತ್ತೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ದಾಖಲೆ ನೀಡುವುದನ್ನು ಕಡ್ಡಾಯಗೊಳಿಸುವುದು ಕಾನೂನುಬಾಹಿರ.
ಪರಿಶೀಲನೆ ನೆಪದಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟರೆ, ಯಾವುದೇ ಸಮರ್ಥ ಪ್ರಾಧಿಕಾರದ ಆದೇಶವಿಲ್ಲದೆಯೇ ಒಬ್ಬ ನಾಗರಿಕನ ಮೂಲಭೂತ ಪ್ರಜಾಪ್ರಭುತ್ವದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ.
ಜನಪ್ರತಿನಿಧಿ ಕಾಯ್ದೆಯಡಿ ನಿರ್ದಿಷ್ಟ ಕ್ಷೇತ್ರ ಅಥವಾ ಅದರ ಭಾಗಕ್ಕೆ ಮಾತ್ರ ’ವಿಶೇಷ ಪರಿಷ್ಕರಣೆ’ ನಡೆಸಬಹುದು. ಆದರೆ ಆಯೋಗವು ಇಡೀ ರಾಜ್ಯಾದ್ಯಂತ ಇದನ್ನು ಜಾರಿಗೊಳಿಸುತ್ತಿರುವುದು ನಿಯಮಗಳಿಗೆ ವಿರುದ್ಧವಾಗಿದೆ.
ಅರ್ಜಿದಾರರ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ ಚುನಾವಣಾ ಆಯೋಗವು ತನ್ನ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.ಇದು ಪೌರತ್ವ ನಿರ್ಧಾರವಲ್ಲ: ಇದು ದೇಶದಿಂದ ಹೊರಹಾಕುವ ಅಥವಾ ಪೌರತ್ವ ನಿರ್ಣಯಿಸುವ ಪ್ರಕ್ರಿಯೆಯಲ್ಲ. ಕೇವಲ ಅರ್ಹ ನಾಗರಿಕರು ಮಾತ್ರ ಮತದಾರರ ಪಟ್ಟಿಯಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಚುನಾವಣಾ ಪ್ರಕ್ರಿಯೆಯಾಗಿದೆ.
ಇದರಲ್ಲಿ ಯಾವುದೇ ಪೊಲೀಸ್ ಹಸ್ತಕ್ಷೇಪವಿಲ್ಲ. ಕೇವಲ ಚುನಾವಣಾ ಅಧಿಕಾರಿಗಳು ನಿಯಮಾನುಸಾರ, ಜನರಿಗೆ ತೊಂದರೆಯಾಗದಂತೆ ’ಮೃದು ಧೋರಣೆ’ಯ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.
ಈಗಾಗಲೇ ಬಿಹಾರ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಸ್ತುತ ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಹಿಂದೆ ಜನವರಿ ೨೯ ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.


























