
ಬೆಂಗಳೂರು, ಮೇ ೨೭- ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬದಲಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಪಟ್ಟ ಕಟ್ಟಲು ನಿರ್ಧರಿಸಿರುವ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೂ ಹೊಸ ಸಾರಥಿಯನ್ನು ನೇಮಕ ಮಾಡಲಿದ್ದು, ಸಚಿವ ಸತೀಶ್ ಜಾರಕಿಹೊಳಿಯವರಿಗೆ ಕೆಪಿಸಿಸಿ ಸಾರಥ್ಯ ಒಲಿಯುವ ಸಾಧ್ಯತೆ ಇದೆ.
ಕಳೆದ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಎದುರಿಸಿತ್ತು. ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾದ ನಂತರವೂ ಲೋಕಸಭಾ ಚುನಾವಣೆಗೂ ಡಿ.ಕೆ. ಶಿವಕುಮಾರ್ ರವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸಿತ್ತು. ಲೋಕಸಭಾ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ಮುನ್ನಲೆಗೆ ಬಂದಿದ್ದವಾದರೂ ಡಿ.ಕೆ. ಶಿವಕುಮಾರ್ ರವರೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡೂ ಹುದ್ದೆಗಳನ್ನು ನಿಭಾಯಿಸಿದ್ದರು.
ಸತೀಶ್ ಜಾರಕಿಹೊಳಿ ಅವರು ಈ ಹಿಂದೆಯೇ ಸಚಿವ ಸ್ಥಾನ ಪದತ್ಯಾಗ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಲು ತಾವು ಸಿದ್ದ ಎಂದು ಹೇಳಿದ್ದರಾದರೂ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮನಸ್ಸು ಮಾಡಿರಲಿಲ್ಲ. ಈಗ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ರವರನ್ನು ನೇಮಕ ಮಾಡಲು ಹೈಕಮಾಂಡ್ ನಿರ್ಧರಿಸಿದ್ದು, ಡಿ.ಕೆ. ಶಿವಕುಮಾರ್ ರವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಬೇಕಾಗುತ್ತದೆ. ಹಾಗಾಗಿ ಕೆಪಿಸಿಸಿಗೂ ಹೈಕಮಾಂಡ್ ಹೊಸ ಅಧ್ಯಕ್ಷರನ್ನು ನೇಮಕ ಆಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿಯವರಿಗೆ ಕೆಪಿಸಿಸಿ ಸಾರಥ್ಯ ಒಲಿಯುವ ಸಾಧ್ಯತೆಗಳು ಹೆಚ್ಚಿವೆ.
ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ಸುರ್ಜೇವಾಲ ರವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ರವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ ನಂತರ ಕೆಪಿಸಿಸಿ ಸಾರಥ್ಯ ವಹಿಸಲಿರುವವರ ಹೆಸರನ್ನು ಪ್ರಕಟಿಸುವರು ಎಂದು ಹೇಳಲಾಗಿದೆ.


























