Home ಜಿಲ್ಲೆ ಮೈಸೂರು ಎಸ್ ಬಿಐ ಉದ್ಯೋಗಿಗಳಿಬ್ಬರ ಆತ್ಮಹತ್ಯೆ

ಎಸ್ ಬಿಐ ಉದ್ಯೋಗಿಗಳಿಬ್ಬರ ಆತ್ಮಹತ್ಯೆ

ಮೈಸೂರು,ಆ.೧೪-ಬರುವ ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ ಎಸ್ ಬಿಐ ಉದ್ಯೋಗಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹುಣಸೂರು ಹಾಗೂ ಕೇರಳದಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (೨೬) ಮೃತ ಯುವತಿ. ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿದ್ದ ಅನುಶ್ರೀಗೆ ತರಬೇತಿ ವೇಳೆ ಕೇರಳದ ಎರ್ನಾಕುಲಂನ ಎಸ್ ಬಿಐ
ನಲ್ಲಿ ಕೆಲಸ ಮಾಡುತ್ತಿದ್ದ ಇರಿಟ್ಟಿ ಮೂಲದ ಅಮಲ್ ಎಂಬ ಯುವಕನ ಪರಿಚಯವಾಗಿತ್ತು.

ಪರಿಚಯ ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಿಶ್ಚಯವಾಗಿ ಡಿಸೆಂಬರ್‌ನಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಮದುವೆಗೂ ಕೆಲವೇ ತಿಂಗಳು ಬಾಕಿ ಇರುವಾಗ ಜೋಡಿಯ ಬದುಕು ದುರಂತದಲ್ಲಿ ಅಂತ್ಯವಾಗಿದೆ.

ಅನುಶ್ರೀ ಮೈಸೂರು ಜಿಲ್ಲೆಯ ಹುಣಸೂರು ನಗರದ ಸುಬ್ಬಣ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ಘಟನೆಗೂ ಮುನ್ನ ತಂದೆ-ತಾಯಿ ಹಾಗೂ ಸಹೋದರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅನುಶ್ರೀ ಹಾಗೂ ಅಮಲ್ ನಡುವೆ ಫೋನ್‌ನಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಈ ಜಗಳದಿಂದ ಬೇಸತ್ತು ಅನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಾಥಮಿಕವಾಗಿ ತಿಳಿದುಬಂದಿದೆ.

ಅನುಶ್ರೀ ಸಾವಿನ ವಿಚಾರ ತಿಳಿದ ಬಳಿಕ ಅಮಲ್ ಕೂಡ ತೀವ್ರ ಮನನೊಂದು ಕೇರಳದ ಇರಿಟ್ಟಿ ನಗರದ ಲಾಡ್ಜ್‌ನಲ್ಲಿ ರೂಂ ಬಾಡಿಗೆಗೆ ಪಡೆದು ನೇಣಿಗೆ ನೇಣಿಗೆ ಶರಣಾಗಿದ್ದಾರೆ.

ಪ್ರೀತಿಸಿ ಮದುವೆಯಾಗಲು ಸಿದ್ಧವಾಗಿದ್ದ ಜೋಡಿ ನೇಣಿಗೆ ಶರಣಾಗಿರುವುದು ಎರಡು ಕುಟುಂಬದಲ್ಲಿ ಆಘಾತ ಮೂಡಿಸಿದೆ. ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ.