
ಚಿಕ್ಕಬಳ್ಳಾಪುರ,ಜು.೨೯:ಆಧುನಿಕ ಸಮಾಜದಲ್ಲಿ ಬಾಳ್ವೆ ನಡೆಸುತ್ತಿರುವ ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ನಿರ್ದಿಷ್ಟ ಗುರಿ ಇಟ್ಟು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಕಾಮಧೇನು ಟ್ರಸ್ಟ್ ಹಾಗೂ ವಿಪ್ರ ವನಿತಾ ವೇದಿಕೆಯ ಪ್ರಧಾನ ಸಂಸ್ಥಾಪಕರು ಹಾಗೂ ಅಧ್ಯಕ್ಷ ರಾಧಾ ಡಾ. ಸುವರ್ಣ ಅಮರನಾಥ್ ತಿಳಿಸಿದರು.
ನಗರದ ಕೋಟೆ ಪ್ರದೇಶದ ನಿವಾಸಿ ಸಿ ಎಸ್ ಲಕ್ಷ್ಮಣರಾವ್ ಮನೆಯಲ್ಲಿ ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದರು.
ನಮ್ಮ ಸಂಸ್ಥೆಯ ವತಿಯಿಂದ ನಾಲ್ಕನೇ ವರ್ಷದ ವಿದ್ಯಾರ್ಥಿ ಪ್ರೋತ್ಸಾಹ ಧನ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವುದು ನನಗೆ ತುಂಬಾ ಸಂತೋಷ ತಂದಿರುವ ವಿಷಯ ಆಗಿದೆ ಎಂದರು.
ಪ್ರೋತ್ಸಾಹ ಧನ ಪಡೆದುಕೊಂಡ ವಿದ್ಯಾರ್ಥಿಗಳು ತಾವು ಪಡೆದುಕೊಂಡ ಹಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಮುಂದೆ ಅವರು ಕೆಲಸ ಕಾರ್ಯಗಳಿಗೆ ಸೇರಿ ಹಣವಂತರಾದಾಗ ಬಡ ವಿಪ್ರ ಬಾಂಧವರಿಗೆ ಇದೇ ರೀತಿ ಸಹಾಯ ನೀಡುವಂತಹ ಮನಸ್ಥಿತಿ ಹೊಂದಿರಬೇಕು ಎಂದು ಕರೆ ನೀಡಿದರು.
ವಿಪ್ರ ವನಿತಾ ವೇದಿಕೆಯ ಅಧ್ಯಕ್ಷರಾದ ಮಂಜುಳಾ ಲಕ್ಷ್ಮಣರಾವ್ ಮಾತನಾಡಿ,ನಮ್ಮ ಸ್ವಗೃಹದಲ್ಲಿ ಸಮಾನ ಮನಸ್ಕರ ತಂಡದೊಂದಿಗೆ ವಿಪ್ರ ಜನಾಂಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನನಗೆ ತುಂಬಾ ಸಂತೋಷದ ವಿಷಯ ಆಗಿದೆ.ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ನಾಗೇಶ್ ಮಾತನಾಡಿ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದಲೂ ಸಹ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಅನೇಕ ಕಾರ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಲಾಚಕಮ್ಮಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ಎಸ್. ರಮೇಶ್ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ್ ಮೂರ್ತಿ, ರಮೇಶ್ ಶ್ರೀ ನಾಥ್ ಗುಡಿಬಂಡೆ ಲಕ್ಷ್ಮಿ ಪುರಸಭೆ ಮಾಜಿ ಸದಸ್ಯ ಶಾರದಾಂಬ ರಾವ್ ಹಾಗೂ ಬ್ರಾಹ್ಮಣ ಸಮಾಜದ ಮಹಿಳೆಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.


































