Home ಜಿಲ್ಲೆ ಸೆ.೭ರಂದು ಯಾದಗಿರಿ ಜಿಲ್ಲಾ ಬಂದ್‌ಗೆ ಸರ್ವ ಸಂಘಟನೆಗಳ ಹೋರಾಟ ಸಮಿತಿ ಕರೆ: ಮಲ್ಲಿಕಾರ್ಜುನ ರಾಮಸಮುದ್ರ

ಸೆ.೭ರಂದು ಯಾದಗಿರಿ ಜಿಲ್ಲಾ ಬಂದ್‌ಗೆ ಸರ್ವ ಸಂಘಟನೆಗಳ ಹೋರಾಟ ಸಮಿತಿ ಕರೆ: ಮಲ್ಲಿಕಾರ್ಜುನ ರಾಮಸಮುದ್ರ

ಯಾದಗಿರಿ: ಜಿಲ್ಲೆಯ ಐದು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ, ಸೆಪ್ಟೆಂಬರ್ ೭ರಂದು ಯಾದಗಿರಿ ಜಿಲ್ಲಾ ಕೇಂದ್ರವನ್ನು ಸಂಪೂರ್ಣ ಬಂದ್ ಮಾಡಲು ಸರ್ವ ಸಂಘಟನೆಗಳ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ರಾಮಸಮುದ್ರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳೆಂದು ಘೋಷಿಸಿರುವ ಸರ್ಕಾರ, ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ಯಾದಗಿರಿ ಜಿಲ್ಲೆಯನ್ನು ಪೂರ್ಣ ಪ್ರಮಾಣದಲ್ಲಿ ಬರಪೀಡಿತ ಜಿಲ್ಲೆ ಎಂದು ಘೋಷಿಸಿಲ್ಲ. ಶಹಾಪುರ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ, ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ ಹಾಗೂ ಹುಣಸಗಿ ತಾಲೂಕುಗಳನ್ನು ಕೈಬಿಟ್ಟಿರುವುದು ಜಿಲ್ಲೆಯ ರೈತರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಒಂದು ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಉಳಿದ ತಾಲೂಕುಗಳನ್ನು ಕೈಬಿಟ್ಟಿರುವುದರಿಂದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಜಿಲ್ಲಾಡಳಿತ ಹಾಗೂ ಈ ಭಾಗದ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ನಾಯಕ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷ ಮರೆಪ್ಪ ನಾಯಕ ಮೊಗದಂಪುರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಜನರು ಹಾಗೂ ಜಾನುವಾರುಗಳು ಸಂಕಷ್ಟ ಎದುರಿಸುತ್ತಿವೆ ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಹೊಟ್ಟೆಪಾಡಿಗಾಗಿ ಪ್ರತಿದಿನ ಸಾವಿರಾರು ಜನರು ಬೆಂಗಳೂರು ಹಾಗೂ ಮುಂಬೈ ಸೇರಿದಂತೆ ಮಹಾನಗರಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಗಂಭೀರ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ವಿಫಲವಾಗಿವೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೭ರಂದು ಯಾದಗಿರಿ ಜಿಲ್ಲಾ ಕೇಂದ್ರವನ್ನು ಸಂಪೂರ್ಣ ಬಂದ್ ಮಾಡಲು ಸರ್ವ ಸಂಘಟನೆಗಳ ಹೋರಾಟ ಸಮಿತಿ ನಿರ್ಧರಿಸಿದ್ದು, ರೈತರ ಹಿತದೃಷ್ಟಿಯಿಂದ ಸಾರ್ವಜನಿಕರು ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾತನಾಡಿ, ರೈತರು ಸಂಕಷ್ಟದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಅವರ ಕಣ್ಣೀರಿನೊಂದಿಗೆ ನಿಲ್ಲುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಿದೆ. ಬರಪೀಡಿತ ತಾಲೂಕುಗಳ ಘೋಷಣೆ ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಜಿಲ್ಲೆಯ ಜನತೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಯಾದಗಿರಿ ಜಿಲ್ಲಾ ಕೇಂದ್ರದ ವ್ಯಾಪಾರಸ್ಥರು, ಕೃಷಿ ಮಾರುಕಟ್ಟೆ ವರ್ತಕರ ಸಂಘ, ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು, ಕಿರಾಣಿ ಹಾಗೂ ಹೋಟೆಲ್ ಮಾಲೀಕರ ಸಂಘಗಳು, ಪ್ರಗತಿಪರ ಸಂಘಟನೆಗಳು ಮತ್ತು ವಿವಿಧ ಸಮಾಜಗಳ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿ, ರೈತರ ಹಿತದೃಷ್ಟಿಯಿಂದ ಒಂದು ದಿನದ ಮಟ್ಟಿಗೆ ಜಿಲ್ಲಾ ಕೇಂದ್ರವನ್ನು ಸಂಪೂರ್ಣ ಬಂದ್ ಮಾಡುವಂತೆ ಸರ್ವ ಸಂಘಟನೆಗಳ ಹೋರಾಟ ಸಮಿತಿ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ದೇವಿಂದ್ರಪ್ಪ, ಕನ್ನಡಪರ ಹೋರಾಟಗಾರ ರವಿ ಕೆ. ಮುದ್ನಾಳ, ಭೀಮಾಶಂಕರ ಆಲ್ದಾಳ, ಶರಣಪ್ಪ ಜಾಕನಹಳ್ಳಿ, ಖಾಸಿಮಸಾಬ್ ಗಡ್ಡೆಸೂಗೂರು, ಬಂಗಾರು ಜೆ.ಬಿ. ರಾಠೋಡ, ವಿಜಯ ಭಾರತ, ಭೀಮು ಪೂಜಾರಿ, ಭೀಮರಾಯ ಭಂಡಾರಿ, ಎಂ.ಆರ್.ಪಿ. ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ಭೀಮರಾಯ ಯಲ್ಹೇರಿ, ಅಶೋಕ ಐಕೂರ, ಎಸ್. ನಿಜಲಿಂಗಪ್ಪ ಪೂಜಾರಿ, ಸಾಬಣ್ಣ ಹೊರುಂಚಾ, ಹೊನ್ನಪ್ಪ ಮುಷ್ಟೂರು, ಮಲ್ಲಿಕಾರ್ಜುನ ಮಂಜುನಾಥ ಬಾಚವಾರ, ಶ್ರೀಮತಿ ಚಂದ್ರಕಲಾ ಗುತ್ತೇದಾರ, ಬಸ್ಸುಗೌಡ ಚಟ್ನಳ್ಳಿ, ಸೈದಪ್ಪ ಕೂಲೂರಕರ್, ರಾಜಶೇಖರ ಎದುರುಮನಿ, ಚಂದಪ್ಪ ನಾಯಕ ರಾಮಸಮುದ್ರ, ಶಂಕರಗೌಡ ಯಲ್ಸತ್ತಿ, ಪೋಲಪ್ಪ ನಾರಾಯಣೋರ್, ದೊಡ್ಡಯ್ಯ ಹಳಿಗೇರಿ, ವಿಕ್ರಮ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.