
ಕೆ.ಜಿ.ಎಫ್.ಸೆ.೦೭-ಕೆ.ಜಿ.ಎಫ್ ಜಿಲ್ಲೆಯಲ್ಲಿ ರೌಡಿ ಚಟುವಟಿಕೆ ಮತ್ತು ಮಾದಕವಸ್ತುಗಳ ಮಾರಾಟ ವಿರುದ್ಧ ಕಠಿಣ ಕ್ರಮಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಮುಂದಾಗಿದ್ದು,ಈ ನಿಟ್ಟಿನಲ್ಲಿ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಸಕ್ರಿಯ ರೌಡಿಗಳು,ಕಳವು, ಗಾಂಜಾ ಪ್ರಕರಣದ ಆರೋಪಿ ಮತ್ತು ಚಿನ್ನದ ಗಣಿ ಕಳ್ಳರ ಪರೇಡ್ ಅನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ್ ಮತ್ತು ಡಿವೈಎಸ್‌ಪಿ ವಿ.ಲಕ್ಷ್ಮಯ್ಯ ನೇತೃತ್ವದ ಡಿ.ಎ.ಆರ್ ಕವಾಯತು ಮೈದಾನದಲ್ಲಿ ರೌಡಿ ಪೇರೆಡ್ ಹಮ್ಮಿಕೊಂಡಿದ್ದು,ಕೆ.ಜಿ.ಎಫ್ ಪೊಲೀಸ್ ಘಟಕದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಕ್ರಿಯ ರೌಡಿಗಳು,ಕಳವು ಆರೋಪಿಗಳು,ಗಾಂಜಾ ಪ್ರಕರಣದ ಆರೋಪಿಗಳು ಮತ್ತು ಚಿನ್ನದ ಗಣ ಪ್ರದೇಶದಲ್ಲಿನ ಕಳ್ಳತನ ಆರೋಪಿಗಳು ಸೇರಿದಂತೆ ೧೦೦ ಜನ ಹಾಜರಾಗಿದ್ದರು.
ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಸಾರ್ವಜನಿಕರ ನೆಮ್ಮದಿಗೆ ತೊಂದರೆ ನೀಡದೆ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಲು ತಿಳುವಳಿಕೆ ನೀಡಿದ್ದಾರೆ.
ರೌಡಿಗಳ ಮೇಲೆ ಪಿ.ಎ.ಆರ್ ದಾಖಲಾಗಿ ಬಾಂಡ್ ಓವರ್ ಅವಧಿಯಲ್ಲಿರುವಾಗ ರೌಡಿಗಳು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ೨ ಲಕ್ಷದಂಡ ವಿಧಿಸಲಾಗುವುದು.ಜೊತೆಗೆ ಗೂಂಡಾ ಮತ್ತು ಗಡಿಪಾರು ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಎಚ್ಚರಿಸಿದರು.
ರೌಡಿ ಪೇರೆಡ್ ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಎಂ.ಎಸ್ ಅನಿಲ್ ಕುಮಾರ್, ಜಗದೀಶ್ ಎಸ್.ಆರ್, ಆರ್.ಪಿ.ಐ ಸೋಮಶೇಖರ್, ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ಗಳಾದ ಹೊನ್ನೇಗೌಡ ಪಿ.ಎಂ, ತ್ಯಾಗರಾಜ್ ಎಂ, ಮಾಹೇಶ್ ಮಾಲಿ, ಸಂಗಮೇಶ್ ಕೋಲ್ಹಾರ್, ಮಾಲಾ ಜಿ, ರಾಜೇಶ್ವರಿ ಟಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

































