Home ಜಿಲ್ಲೆ ಬೆಂಗಳೂರು ಜಾತಿ-ಮತ ಭೇದವಿಲ್ಲದೆ ಸಮಾಜಮುಖಿ ಸೇವೆ: ಶ್ರೀ ಮಹದೇವ ಸ್ವಾಮೀಜಿ

ಜಾತಿ-ಮತ ಭೇದವಿಲ್ಲದೆ ಸಮಾಜಮುಖಿ ಸೇವೆ: ಶ್ರೀ ಮಹದೇವ ಸ್ವಾಮೀಜಿ

ವಿಜಯಪುರ,ಜು.೩೦: ಇಂದಿನ ಯುವಜನತೆಗೆ ಜಗಜ್ಯೋತಿ ಬಸವಣ್ಣನವರ ತತ್ವ ಚಿಂತನೆಗಳು, ಸಿದ್ದಗಂಗಾ ಮಠದ ಲಿಂ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಜೀವನದ ನಡೆ ಹಾಗೂ ಬಸವಕಲ್ಯಾಣ ಮಠದ ಅಧ್ಯಕ್ಷ ಮಹದೇವ ಸ್ವಾಮೀಜಿ ಅವರ ಕಷ್ಟದಲ್ಲಿ ಅರಳಿದ ಬದುಕು ಅತ್ಯಂತ ಆದರ್ಶಮಯವಾಗಿವೆ ಎಂದು ಶ್ರೀವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವ ರಮಾನಂದ ಮಹಾ ಸ್ವಾಮೀಜಿ ಹೇಳಿದರು.


ಮೇಲೂರು ರಸ್ತೆಯ ಬಸವಕಲ್ಯಾಣ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವಕುಮಾರ ಮಹಾಸ್ವಾಮಿಯ ೧೧೯ನೇ ಜನ್ಮದಿನೋತ್ಸವ, ಬಸವಕಲ್ಯಾಣ ಮಠದ ೩೭ನೇ ವರ್ಷದ ಪೀಠಾರೋಹಣ ಮಹೋತ್ಸವ, ಬಸವ ಜಯಂತಿ, ಎಂ. ಮರಿಯಮ್ಮನವರ ೯ನೇ ವರ್ಷದ ಸ್ಮರಣೋತ್ಸವ, ಶ್ರೀ ಮಹದೇವ ಸ್ವಾಮೀಜಿಗಳವರ ೬೭ನೇ ವರ್ಷದ ವರ್ಧಂತ್ಯೋತ್ಸವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ವಚನ ಸಾಹಿತ್ಯವನ್ನು ವಿಶ್ಲೇಷಿಸಿದ ಶ್ರೀಗಳು,ಶರಣರು ಶ್ರದ್ಧೆ ಹಾಗೂ ಭಕ್ತಿಯಿಂದ ಶಿವಪೂಜೆಯನ್ನು ನೆರವೇರಿಸಿದಾಗ ಅವರ ಪಾಪಗಳೆಲ್ಲವೂ ಕಳೆದು, ಅಪಮೃತ್ಯು ಸಂಭವಿಸದೆ ಮೋಕ್ಷ ದೊರೆಯುತ್ತದೆ ಎಂದು ತಿಳಿಸಿದರು.


ಸಾನಿಧ್ಯ ವಹಿಸಿ ಮಾತನಾಡಿದ ಬಸವಕಲ್ಯಾಣ ಮಠದ ಅಧ್ಯಕ್ಷ ಮಹದೇವ ಸ್ವಾಮೀಜಿ,ಯಾವುದೇ ಜಾತಿ, ಮತ, ಪಂಥ ಹಾಗೂ ಭೇದಭಾವವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿ ಸಮಾಜಮುಖಿಯಾಗಿ ಮಠವನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಕ್ತಾದಿಗಳು ಇದೇ ರೀತಿಯ ಪ್ರೀತಿ-ಆದರಗಳನ್ನು ಕಿರಿಯ ಶ್ರೀ ಸದಾಶಿವ ಸ್ವಾಮಿಗೂ ನೀಡಬೇಕು ಎಂದು ಕೋರಿದರು.


ಮಾಜಿ ಸಂಸದರು ಹಾಗೂ ರಾಜ್ಯ ೫ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ,ಗುರುಪೂರ್ಣಿಮೆಯ ದಿನದಂದು ಸಮಾಜದಲ್ಲಿ ಗುರುಗಳಿಗೆ ನೀಡಬೇಕಾದ ಗೌರವ ಮತ್ತು ಮಹತ್ವದ ಕುರಿತು ಬೆಳಕು ಚೆಲ್ಲಿದರು.


ಬಸವೇಶ್ವರನಗರದ ವಿನಾಯಕ ದೇವಾಲಯದಿಂದ ಶ್ರೀ ಮಹದೇವ ಸ್ವಾಮೀಜಿ, ಶ್ರೀ ಬಸವ ರಮಾನಂದ ಸ್ವಾಮೀಜಿ ಹಾಗೂ ಶ್ರೀ ಸದಾಶಿವ ಸ್ವಾಮೀಜಿಯವರನ್ನು ವೀರಗಾಸೆಯ ಜಾನಪದ ಕಲಾತಂಡದೊಂದಿಗೆ ಆಕರ್ಷಕ ಅಲಂಕೃತ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಠಕ್ಕೆ ಕರೆತರಲಾಯಿತು.


ದೃಷ್ಟಿ ಆಸ್ಪತ್ರೆ, ಅಪೋಲೋ ಮೆಡಿಕಲ್ ಸ್ಟೋರ್ ಹಾಗೂ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಕಣ್ಣಿನ ತಪಾಸಣೆ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ನಡೆಸಿ, ಡಾ. ಸಂತೋಷ್ ನೇತೃತ್ವದಲ್ಲಿ ಉಚಿತ ಔಷಧಗಳನ್ನು ವಿತರಿಸಲಾಯಿತು.ವಿಜಯಪುರ ಪಟ್ಟಣದ ಬಸವಕಲ್ಯಾಣ ಮಠದ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಕ್ಯೂ ಆರ್ ಕೋಡ್ ಸ್ಕ್ಯಾನರನ್ನು ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳಿಗೆ ಶರಣ ಸಂಸ್ಕೃತಿಯಂತೆ ಮಹಾ ಅನ್ನದಾಸೋಹ ಏರ್ಪಡಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಮಠದ ಕಿರಿಯ ಶ್ರೀಗಳಾದ ಶ್ರೀ ಸದಾಶಿವ ಸ್ವಾಮೀಜಿ, ಅಂಡ್ರಕಳ್ಳಿ ಶ್ರೀ ಪಟ್ಟದ ಪಂಚಾಕ್ಷರಿ ಸ್ವಾಮೀಜಿ, ಚಕ್ರಭಾವಿ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ದೊಡ್ಡಬಳ್ಳಾಪುರ ಖಾನಿಮಠದ ಶ್ರೀ ಬಸವರಾಜ ಸ್ವಾಮೀಜಿ, ಶ್ರೀ ಬಸವೇಶ್ವರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಮರಳವಾಡಿ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ಶ್ರೀ ಶಿವಲಿಂಗ ಸ್ವಾಮೀಜಿ ಸೇರಿದಂತೆ ಹಲವು ಹರ-ಗುರು ಚರಮೂರ್ತಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರಾದ ಹೆಚ್.ಆರ್. ನಾರಾಯಣಪ್ಪ, ಬೊಮ್ಮಸಂದ್ರದ ವಿ.ಎಂ. ಗುಮ್‌ಕಾರ್, ಕೆಂಗೇರಿಯ ಪ್ರಕಾಶ್ ಹಾಗೂ ವಿಶ್ವನಾಥ್, ಅರ್ಪುದರಾಜ್, ಜಾಲಹಳ್ಳಿಯ ಬಿ.ಎಂ. ಶಂಕರಪ್ಪ, ಪಿ.ಸಿ. ರಮೇಶ್, ವಸಂತ್ ಕುಮಾರ್ ಹಾಗೂ ಉದ್ಯಮಿ ರಾಜಪ್ಣ ಅವರನ್ನು ಶ್ರದ್ಧಾಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.