
ತುಮಕೂರು, ಅ. ೩- ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯ ಆರಂಭಿಸಿದೆ. ಅರ್ಹ ಭಾರತ ನಿವಾಸಿಗಳು ಮತದಾರರ ಪಟ್ಟಿ ಸೇರುತ್ತಾರೆ, ಯಾರನ್ನೂ ಉದ್ದೇಶ ಪೂರಕವಾಗಿ ಮತದಾರ ಪಟ್ಟಿಯಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ, ಎಸ್ಐಆರ್ ಪ್ರಕ್ರಿಯೆಯಲ್ಲಿ ಸೇರದ ಅರ್ಹ ಮತದಾರರು ಸೂಕ್ತ ದಾಖಲಾತಿ ನೀಡಿ ಮತದಾರರ ಪಟ್ಟಿ ಸೇರ್ಪಡೆಯಾಗಲು ಅವಕಾಶವಿದೆ ಎಂದು ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಹೇಳಿದ್ದಾರೆ.
ಮತದಾರರ ಪಟ್ಟಿ ತಿದ್ದುಪಡಿ ಮಾಡಲು ಕೈಗೊಳ್ಳಲು ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ ಬೃಹತ್ ಅಭಿಯಾನ ಆರಂಭಿಸಿದೆ. ದೋಷ ರಹಿತ ಮತ್ತು ನಿಖರವಾದ ಮತದಾರರ ಪಟ್ಟಿಯನ್ನು ತಯಾರಿಸುವ ಪ್ರಕ್ರಿಯೆ ಆರಂಭಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿರುವುದು ಸರಿಯಲ್ಲ. ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಬೇಕು ಎಂಬುದೇ ಈ ಅಭಿಯಾನದ ಉದ್ದೇಶವಾಗಿದೆ. ಯಾರದೇ ಹೆಸರು ಬಿಟ್ಟು ಹೋಗಿದ್ದರೆ ದಾಖಲೆ ಒದಗಿಸಿ ಸೇರ್ಪಡೆ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಎಸ್ಐಆರ್ ಅಭಿಯಾನದಲ್ಲಿ ಸೇರ್ಪಡೆಯಾಗಿ ಪಡೆಯುವ ಮತದಾರರ ಗುರುತಿನ ಚೀಟಿ ಪ್ರಮುಖ ದಾಖಲೆಯಾಗಲಿದೆ. ೧೮ ವರ್ಷ ವಯಸ್ಸನ್ನು ಪೂರೈಸಿದ ಹೊಸ ಯುವ ಮತದಾರರನ್ನು ಪಟ್ಟಿಗೆ ಸೇರಿಸುವುದು. ಅನರ್ಹರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದು, ಮೃತರಾದವರು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡವರು ಮತ್ತು ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದು ಈ ಕಾರ್ಯಕ್ರಮದ ಉದೇಶವಾಗಿದೆ ಎಂದು ತಿಳಿಸಿದ್ದಾರೆ.
ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರ ನಕಲಿ ನೊಂದಣಿಗಳನ್ನು ಪತ್ತೆಹಚ್ಚಿ ಸರಿಪಡಿಸು ವುದು.ವಿಳಾಸ ಮತ್ತು ಮಾಹಿತಿ ನವೀಕರಣ: ಮತದಾರರ ತಪ್ಪು ಹೆಸರು, ತಪ್ಪು ವಯಸ್ಸು ಅಥವಾ ವಿಳಾಸದ ದೋಷಗಳನ್ನು ಸರಿಪಡಿಸಿ ಪಟ್ಟಿಯನ್ನು ಶುದ್ದೀಕರಿಸುವುದು.ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ ಎಂದು ಎಸ್.ಪಿ.ಚಿದಾನಂದ್ ಹೇಳಿದ್ದಾರೆ.
ಎನ್ಡಿಎ ಅಭ್ಯರ್ಥಿ ಗೆಲ್ಲುವ ವಿಶ್ವಾಸ
ಮುಂದಿನ ತಿಂಗಳು ನಡೆಯುವ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಶ್ರಮಿಸುತ್ತಿವೆ. ಕ್ಷೇತ್ರದೆಲ್ಲೆಡೆ ಇವರ ಪರ ಒಲವು ವ್ಯಕ್ತವಾಗಿದೆ. ಪದವೀಧರ ಮತದಾರರು ಸುರೇಶ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಬೇಕು. ಕೆ.ಎಂ. ಸುರೇಶ್ ಅವರು ಆಯ್ಕೆಯಾದ ನಂತರ ವಿಧಾನಪರಿಷತ್ತಿನಲ್ಲಿ ಪದವೀಧರರ ಪರವಾದ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ೨೫ ವರ್ಷಗಳ ಸಾರ್ವಜನಿಕ ಸೇವಾ ಪಯಣ ಹಾಗೂ ಅವರು ಹುಟ್ಟು ಹಬ್ಬದ ಅಂಗವಾಗಿ ಸೆಪ್ಟಂಬರ್ ೧೭ರಿಂದ ಅಕ್ಟೋಬರ್ ೧೭ರವರೆಗೆ ದೇಶಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಹಾಗೂ ಸವಲತ್ತುಗಳನ್ನು ಜನರಿಗೆ ತಲುಪಿಸುವ ಸಂಕಲ್ಪ ಆಭಿಯಾನ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಭಾರತದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ, ದೇಶದ ಅಭಿವೃದ್ಧಿ, ಸುಭದ್ರತೆಗೆ ಶ್ರಮಿಸಿರುವ ಪ್ರಧಾನಿ ಮೋದಿ ಯವರಿಗೆ ಈ ಮೂಲಕ ಅಭಿನಂದಿಸುವ ಕಾರ್ಯಕ್ರಮವೂ ಇದಾಗಿದೆ ಎಂದು ಎಸ್.ಪಿ.ಚಿದಾನಂದ್ ತಿಳಿಸಿದ್ದಾರೆ.

























