Home ಜಿಲ್ಲೆ ತುಮಕೂರು ಅಕ್ರಮ ಎಸುಗುವವರನ್ನು ತಾಲ್ಲೂಕು ಬಿಟ್ಟು ಓಡಿಸುತ್ತೇನೆ: ಶಾಸಕ ವೆಂಕಟೇಶ್

ಅಕ್ರಮ ಎಸುಗುವವರನ್ನು ತಾಲ್ಲೂಕು ಬಿಟ್ಟು ಓಡಿಸುತ್ತೇನೆ: ಶಾಸಕ ವೆಂಕಟೇಶ್

ಪಾವಗಡ, ಅ. ೧೭- ತಾಲ್ಲೂಕಿನಲ್ಲಿ ಅಕ್ರಮ ಎಸಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಅವರನ್ನು ತಾಲ್ಲೂಕು ಬಿಟ್ಟು ಓಡಿಸುತ್ತೇನೆ. ಕನ್ನಿಕಾ ಪರಮೇಶ್ವರಿ ದೇವಸ್ಥಾನದ ನಿರ್ಮಾಣಕ್ಕೆ ಅಡ್ಡಿಪಡಿಸುವವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಶಾಸಕ ಹೆಚ್.ವಿ. ವೆಂಕಟೇಶ್ ಹೇಳಿದರು.


ಪಟ್ಟಣದಲ್ಲಿ ಆರ್ಯ ವೈಶ್ಯ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಬಡ ಮಕ್ಕಳು ಉನ್ನತ ಶಿಕ್ಷಣ ಪಡೆದು ಇತರರಿಗೆ ಮಾದರಿಯಾಗಬೇಕು. ಒಳ್ಳೆಯ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಸಹಾಯ ಧನವನ್ನು ಈಗ ೧೫ ಸಾವಿರದಿಂದ ೨೦ ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ವೈಶ್ಯ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.


ಆರ್ಯ ವೈಶ್ಯ ಸಮುದಾಯಕ್ಕೆ ನಾನು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತೇನೆ. ರಾಜಕೀಯವಾಗಿ ಬೆಳೆಯಲು ಎರಡು ಕೌನ್ಸಿಲರ್ ಹುದ್ದೆ ಹಾಗೂ ಒಂದು ನಾಮನಿರ್ದೇಶನ ಸ್ಥಾನ ನೀಡುವುದಾಗಿ ಭರವಸೆ ನೀಡಿದರು.


ಕನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣ ವಿಚಾರದಲ್ಲಿ ಕೆಲ ಹೊರಗಿನ ವ್ಯಕ್ತಿಗಳ ಜತೆ ಕೆಲ ವೈಶ್ಯರು ಶಾಮೀಲಾಗಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ ಮಾಡುತ್ತಿದ್ದಾರೆ. ಅವರನ್ನು ಪಾವಗಡದಿಂದ ತೊಲಗಿಸುತ್ತೇನೆ. ದೇವಸ್ಥಾನಕ್ಕೆ ಗುದ್ದಲಿ ಪೂಜೆ ನಾನೆ ಮಾಡುತ್ತೇನೆ ಎಂದು ಹೇಳಿದರು.


ನಾನು ಶಾಸಕನಾಗಿರುವವರೆಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸುರೇಶ್ ಬಾಬು ಅವರೇ ಇರುತ್ತಾರೆ ಎಂದರು.


ಆರ್ಯವೈಶ್ಯ ಸಂಘದ ಅಧ್ಯಕ್ಷ ಸುದೇಶ್‌ಬಾಬು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಅತ್ಯಂತ ಮುಖ್ಯ. ಮನುಷ್ಯನಲ್ಲಿರುವ ಜ್ಞಾನ ಹೊರತೆಗೆಯಲು ವಿದ್ಯೆ ಅಗತ್ಯ ಎಂದರು.


ತಾಲ್ಲೂಕಿನಲ್ಲಿ ವೈಶ್ಯ ಸಮುದಾಯದ ಮನೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಂಘದ ಒಗ್ಗಟ್ಟಿಗೆ ದುಡಿಯಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಹೆಚ್.ವಿ. ವೆಂಕಟೇಶ್ ರವರನ್ನು ಸನ್ಮಾನಿಸಲಾಯಿತು ಹಾಗೂ ೪೯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ೬೩ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖಂಡರಾದ ಜಿಎಸ್ ಅನಿಲ್‌ಕುಮಾರ್, ಅಶೋಕ್ ಕುಮಾರ್, ಜಿ.ಪಿ.ಪ್ರಮೋದ್‌ಕುಮಾರ್, ಕೊತ್ತೂರು ಪ್ರಭಾಕರ್ ಮತ್ತಿತರರು ಭಾಗವಹಿಸಿದ್ದರು.