Home ಮುಖಪುಟ ಸುದ್ದಿ ಎಸ್‌ಐಆರ್ ಅಕ್ರಮ: ಸಿಇಸಿ ಚು. ಆಯೋಗಕ್ಕೆ ಸುಪ್ರೀಂ ನೋಟಿಸ್

ಎಸ್‌ಐಆರ್ ಅಕ್ರಮ: ಸಿಇಸಿ ಚು. ಆಯೋಗಕ್ಕೆ ಸುಪ್ರೀಂ ನೋಟಿಸ್

ನವದೆಹಲಿ, ಅ. ೧೫- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮತದಾರರ ಹೆಸರುಗಳನ್ನು ಅಕ್ರಮವಾಗಿ ಕೈಬಿಟ್ಟಿರುವ ಕುರಿತಂತೆ ಕೇಂದ್ರ ಚುನಾವಣಾ ಆಯೋಗ ಮತ್ತು ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಸೇರಿದಂತೆ ಚುನಾವಣಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಇಂದು ನೋಟಿಸ್ ಜಾರಿ ಮಾಡಿದೆ.


ಎಸ್‌ಐಆರ್ ನಲ್ಲಿ ನಡೆದಿರುವ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಮುಖಂಡರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹಾಗೂ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿತು.


ನಿಗದಿತ ಕಾಲಮಿತಿಯೊಳಗೆ ಲಿಖಿತ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಸೂಚಿಸಿದೆ.
ಯಾವುದೇ ಮುನ್ಸೂಚನೆಯಿಲ್ಲದ ಮತ್ತು ಮತದಾರರಿಗೆ ತಮ್ಮ ವಾದ ಮಂಡಿಸಲು ಕಾಲಾವಕಾಶ ನೀಡದೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ರದ್ದುಪಡಿಸಿರುವುದು ಸಂವಿಧಾನದ ೩೨೪ನೇ ವಿಧಿ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರವಾಗಿ ವಕೀಲರು ವಾದ ಮಂಡಿಸಿದರು.


ಎಸ್‌ಐಆರ್ ಪ್ರಕ್ರಿಯೆ ಮೇಲೆ ಮಧ್ಯಂತರ ತಡೆಯಾಜ್ಞೆ ನೀಡುವುದು ಹಾಗೂ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ಪರಿಶೀಲನೆ ನಡೆಸುವ ಮನವಿ ಕುರಿತು ಆಯೋಗದಿಂದ ಉತ್ತರ ಬಂದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ನ್ಯಾಯಪೀಠ ತಿಳಿಸಿತು.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿಯಿರುವ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ, ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿತು.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮುಂದಿಟ್ಟಿವೆ. ಈ ಪ್ರಕ್ರಿಯೆಯ ಪಾರದರ್ಶಕತೆ, ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಹೆಸರುಗಳ ಸೇರ್ಪಡೆ ಮತ್ತು ತೆಗೆದುಹಾಕುವ ಕ್ರಮಗಳ ಕುರಿತು ಪ್ರಶ್ನೆಗಳನ್ನು ಎತ್ತಲಾಗಿದೆ.


ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟವು ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದೆ. ಇದೀಗ ಆಯೋಗ ಮತ್ತು ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ನೀಡಿರುವ ಸುಪ್ರೀಂ ಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಅವರ ಪ್ರತಿಕ್ರಿಯೆಗಳನ್ನು ಪರಿಶೀಲಿಸಲಿದೆ.


ಇದೇ ವೇಳೆ, ಅಕ್ಟೋಬರ್ ೧೦ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು, ವಕೀಲರು ಹಾಗೂ ಪತ್ರಕರ್ತರನ್ನು ಅಕ್ರಮವಾಗಿ ಬಂಧಿಸಲಾಗಿದೆ ಮತ್ತು ಕಿರುಕುಳ ನೀಡಲಾಗಿದೆ ಎಂಬ ಆರೋಪಗಳ ಕುರಿತ ಅರ್ಜಿಗಳ ವಿಚಾರಣೆಯನ್ನೂ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.


ಈ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ಮತ್ತು ಇತರ ಸಂಬಂಧಿತ ಅಧಿಕಾರಿಗಳು ಈಗಾಗಲೇ ನ್ಯಾಯಾಲಯ ಕೇಳಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಸಲ್ಲಿಸಿದ್ದಾರೆ. ಪ್ರತಿಭಟನೆಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಪೀಠ ನಾಲ್ಕು ವಿಭಾಗಗಳಾಗಿ ಗುರುತಿಸಿದೆ.


ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತರಿಗೆ ಕಿರುಕುಳ ನೀಡಲಾಗಿದೆ ಮತ್ತು ಅವರೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂಬ ಆರೋಪಗಳ ಕುರಿತು ವಿವರಣೆ ನೀಡಲು ದೆಹಲಿ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕವಾಗಿ ಹಾಜರಾಗುವಂತೆ ನ್ಯಾಯಾಲಯ ಈ ಹಿಂದೆ ಸೂಚಿಸಿತ್ತು. ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠ, ಈ ಬಗ್ಗೆ ಪರಿಶೀಲನೆ ನಡೆಸುವಂತೆ ನ್ಯಾಯಾಲಯದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿತ್ತು.


ರಾಹುಲ್ ಗಾಂಧಿ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಟಿಎಂಸಿ ಸಂಸದ ಸೌಗತ ರಾಯ್, ಶಿವಸೇನಾ (ಯುಬಿಟಿ) ಮುಖಂಡ ಸಂಜಯ್‌ರಾವತ್, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಬಿ. ರಾಜ (ಸಿಪಿಐ), ಎಂ.ಎ. ಬೇಬಿ (ಸಿಪಿಐಎಂ), ಮಹುವಾ ಮಾಝಿ (ಜೆಎಂಎಂ), ಹಾಗೂ ಇ.ಟಿ. ಮಹ್ಮದ್ ಬಷೀರ್ (ಐಯುಎಂಎಲ್), ಜಂಟಿ ಸಹಿದಾರರಾಗಿದ್ದಾರೆ.