Home ಮುಖಪುಟ ಸುದ್ದಿ ಎಐ ಕಣ್ಣಿಗೆ ಬಿದ್ದ ಕಸದ ಸಮಸ್ಯೆಗಳಿಗೆ ೧೦ ದಿನದಲ್ಲಿ ಮುಕ್ತಿ!ದಕ್ಷಿಣ ಪಾಲಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಸ್ವಚ್ಛತಾ...

ಎಐ ಕಣ್ಣಿಗೆ ಬಿದ್ದ ಕಸದ ಸಮಸ್ಯೆಗಳಿಗೆ ೧೦ ದಿನದಲ್ಲಿ ಮುಕ್ತಿ!ದಕ್ಷಿಣ ಪಾಲಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಸ್ವಚ್ಛತಾ ಅಭಿಯಾನ;

ಬೆಂಗಳೂರು, ಅ.೧೫- ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು, ಕಸದ ರಾಶಿಗಳು ಹಾಗೂ ಬ್ಲಾಕ್ ಸ್ಪಾಟ್‌ಗಳ ಸಮಸ್ಯೆಗೆ ಕಡಿವಾಣ ಹಾಕಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೊರೆ ಹೋಗಿದೆ. ಎಐ ಕ್ಯಾಮೆರಾಗಳ ಮೂಲಕ ಪತ್ತೆಯಾಗಿರುವ ಕಸದ ಸಮಸ್ಯೆಗಳನ್ನು ಮುಂದಿನ ೧೦ ದಿನಗಳೊಳಗೆ ಪರಿಹರಿಸುವಂತೆ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು, ಫುಟ್‌ಪಾತ್ ಒತ್ತುವರಿ, ಬೀದಿ ದೀಪಗಳ ಸಮಸ್ಯೆ, ಅಕ್ರಮ ಜಾಹೀರಾತು ಫಲಕಗಳು, ಕಟ್ಟಡ ತ್ಯಾಜ್ಯ ಮತ್ತು ಕಸದ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಎಐ ಆಧಾರಿತ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದಂತೆ ಪಾಲಿಕೆ ಕಚೇರಿಯಲ್ಲಿ ಮಾರ್ಷಲ್‌ಗಳು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರಿಗೆ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು.

೩೧೧ ಕಿ.ಮೀ. ರಸ್ತೆ ಪೈಕಿ ೧೫೦ ಕಿ.ಮೀ. ಸಮೀಕ್ಷೆ


ಚಿತ್ರಗುಪ್ತ್ ಅರ್ಬನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಕಳೆದ ತಿಂಗಳು ಪ್ರಾಯೋಗಿಕ ಸಮೀಕ್ಷೆ ನಡೆಸಲಾಗಿದೆ. ಪಾಲಿಕೆ ವ್ಯಾಪ್ತಿಯ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳಲ್ಲಿ ಒಟ್ಟು ೩೧೧ ಕಿ.ಮೀ. ಪೈಕಿ ೧೫೦ ಕಿ.ಮೀ. ರಸ್ತೆಯನ್ನು ಎಐ ಕ್ಯಾಮೆರಾ ಅಳವಡಿಸಿದ ವಾಹನದ ಮೂಲಕ ಸಮಗ್ರವಾಗಿ ಪರಿಶೀಲಿಸಲಾಗಿದೆ.


ರಸ್ತೆಯಲ್ಲಿ ಸಂಚರಿಸುವ ಈ ವಾಹನವು ರಸ್ತೆ ಗುಂಡಿಗಳು, ಫುಟ್‌ಪಾತ್ ಒತ್ತುವರಿ, ಕಟ್ಟಡ ತ್ಯಾಜ್ಯ, ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್‌ಗಳು ಹಾಗೂ ಕಸದ ಬ್ಲಾಕ್ ಸ್ಪಾಟ್‌ಗಳನ್ನು ಸ್ವಯಂಚಾಲಿತವಾಗಿ ಗುರುತಿಸಿದೆ. ಪತ್ತೆಯಾದ ಪ್ರತಿಯೊಂದು ಸಮಸ್ಯೆಗೂ ಪ್ರತ್ಯೇಕ ಟಿಕೆಟ್ ಸಂಖ್ಯೆ ನೀಡಲಾಗಿದ್ದು, ಅವುಗಳ ವಿಲೇವಾರಿಗೆ ಡಿಜಿಟಲ್ ವ್ಯವಸ್ಥೆ ರೂಪಿಸಲಾಗಿದೆ.


ಅನ್ವೇಷಕ ಆ?ಯಪ್‌ನಲ್ಲಿ ಸಮಸ್ಯೆಗಳ ವಿವರ


ಎಐ ತಂತ್ರಜ್ಞಾನದಿಂದ ಗುರುತಿಸಲಾದ ಸಮಸ್ಯೆಗಳನ್ನು ಪರಿಹರಿಸಲು ‘ಅನ್ವೇಷಕ’ ಮೊಬೈಲ್ ಆ?ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ?ಯಪ್ ಮೂಲಕ ಸಂಬಂಧಪಟ್ಟ ವಾರ್ಡ್‌ಗಳ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಪತ್ತೆಯಾದ ಸಮಸ್ಯೆಗಳ ವಿವರ ಲಭ್ಯವಾಗಲಿದೆ.


ಸಿಬ್ಬಂದಿ ಆ?ಯಪ್‌ನ ಡ್ಯಾಶ್‌ಬೋರ್ಡ್‌ನಲ್ಲಿ ನಿಯೋಜಿಸಲಾದ ಸಮಸ್ಯೆಗಳನ್ನು ಪರಿಶೀಲಿಸಿ ಸ್ಥಳಕ್ಕೆ ತೆರಳಿ ಪರಿಹಾರ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಪರಿಹರಿಸಿದ ಬಳಿಕ, ಗುರುತಿಸಲಾದ ಸ್ಥಳದ ೫೦ ಮೀಟರ್ ವ್ಯಾಪ್ತಿಯೊಳಗಿನಿಂದ ಜಿಯೋ-ಟ್ಯಾಗ್ ಮಾಡಲಾದ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಸಂಬಂಧಪಟ್ಟ ಟಿಕೆಟ್ ಮುಕ್ತಾಯವಾಗಲಿದೆ ಎಂದು ಕಂಪನಿಯ ಅಧಿಕಾರಿಗಳು ವಿವರಿಸಿದ್ದಾರೆ.


೨,೦೦೦ ಟಿಕೆಟ್‌ಗಳಲ್ಲಿ ಅರ್ಧದಷ್ಟು ಕಸಕ್ಕೆ ಸಂಬಂಧಿಸಿದವು


ಪ್ರಾಯೋಗಿಕ ಸಮೀಕ್ಷೆಯಲ್ಲಿ ಒಟ್ಟು ೨,೦೦೦ ಸಮಸ್ಯೆಗಳ ಟಿಕೆಟ್‌ಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ ಸುಮಾರು ೧,೦೦೦ ಟಿಕೆಟ್‌ಗಳು ಕಸ ಹಾಗೂ ಕಸದ ಬ್ಲಾಕ್ ಸ್ಪಾಟ್‌ಗಳಿಗೆ ಸಂಬಂಧಿಸಿವೆ. ಈ ಎಲ್ಲ ಸಮಸ್ಯೆಗಳನ್ನು ಮುಂದಿನ ೧೦ ದಿನಗಳೊಳಗೆ ಪರಿಹರಿಸುವಂತೆ ಆಯುಕ್ತರು ಸೂಚಿಸಿದ್ದಾರೆ. ಇದರಿಂದ ಕಸದ ಸಮಸ್ಯೆ ನಿವಾರಣೆಯಲ್ಲಿ ಸಿಬ್ಬಂದಿಯ ಕಾರ್ಯಕ್ಷಮತೆ ಹಾಗೂ ಹೊಣೆಗಾರಿಕೆಯನ್ನು ನೇರವಾಗಿ ಪರಿಶೀಲಿಸಲು ಪಾಲಿಕೆಗೆ ಸಾಧ್ಯವಾಗಲಿದೆ.


ಸಾರ್ವಜನಿಕರ ದೂರು ಬರುವ ಮುನ್ನವೇ ಸಮಸ್ಯೆ ಪತ್ತೆ


ಪಾಲಿಕೆ ಪ್ರತಿದಿನ ಅನೇಕ ಸ್ವಚ್ಛತಾ ಹಾಗೂ ನಾಗರಿಕ ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ, ಸೂಕ್ತ ದಾಖಲೆಗಳ ಕೊರತೆಯಿಂದ ಅವು ಸಾರ್ವಜನಿಕರಿಗೆ ಗೋಚರಿಸುವುದಿಲ್ಲ. ಎಐ ಆಧಾರಿತ ವ್ಯವಸ್ಥೆಯು ಕೈಗೊಂಡ ಕ್ರಮಗಳಿಗೆ ಡಿಜಿಟಲ್ ಸಾಕ್ಷ್ಯ ಒದಗಿಸುವುದರ ಜತೆಗೆ, ಸಮಸ್ಯೆಗಳ ಪರಿಹಾರದಲ್ಲಿ ಪಾರದರ್ಶಕತೆ ತರಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.


ಪ್ರತಿ ೩೦ ದಿನಗಳಿಗೊಮ್ಮೆ ಎಐ ಕ್ಯಾಮೆರಾ ಅಳವಡಿಸಿದ ವಾಹನದ ಮೂಲಕ ಹಿಂದಿನ ಟಿಕೆಟ್‌ಗಳ ಸ್ಥಳಗಳನ್ನು ಮರುಪರಿಶೀಲಿಸಿ, ಹೊಸದಾಗಿ ಕಂಡುಬರುವ ಸಮಸ್ಯೆಗಳಿಗೆ ಟಿಕೆಟ್ ಸೃಷ್ಟಿಸಲಾಗುತ್ತದೆ. ಇದರಿಂದ ಸಮಸ್ಯೆಗಳು ಮರುಕಳಿಸುತ್ತಿವೆಯೇ ಎಂಬುದನ್ನೂ ಪರಿಶೀಲಿಸಬಹುದು. ಪ್ರಾಯೋಗಿಕ ಯೋಜನೆಯ ಯಶಸ್ಸು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇಡೀ ದಕ್ಷಿಣ ಪಾಲಿಕೆ ವ್ಯಾಪ್ತಿಗೆ ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆ.ಎನ್. ರಮೇಶ್ ತಿಳಿಸಿದರು.


ಕಾರ್ಯಾಗಾರದಲ್ಲಿ ಡಿಜಿಎಂ ಮನುಜಾ, ಘನತ್ಯಾಜ್ಯ ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಗಳು, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು ಉಪಸ್ಥಿತರಿದ್ದರು.