Home ಜಿಲ್ಲೆ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಿದ ಎಸ್ ಐಆರ್

ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಿದ ಎಸ್ ಐಆರ್

ಬೀದರ್:ಜೂ.೧೭: ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆಯು (ಎಸ್‌ಐ ಆರ್) ಮತಪಟ್ಟಿ ಶುದ್ಧೀಕರಣ ಮಾಡುವ ಅತ್ಯಂತ ಪ್ರಮುಖ ಪ್ರಕ್ರಿಯೆಯಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬುವ ಹಾಗೂ ಸಂವಿಧಾನ ಆಶಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ತರ ಅಭಿಯಾನವಾಗಿದೆ ಎಂದು ಬೀದರ್ ದಕ್ಷಿಣ ಶಾಸಕರಾದ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ಪ್ರತಿಪಾದಿಸಿದ್ದಾರೆ.
ನಗರದ ಬೆಲ್ದಾಳೆ ಫಂಕ್ಶನ್ ಹಾಲ್ ನಲ್ಲಿ ಸೋಮವಾರ ಸಂಜೆ ಬಿಜೆಪಿ ದಕ್ಷಿಣ ಮಂಡಲ ಆಯೋಜಿಸಿದ್ದ ಎಸ್ ಐಆರ್ ಕುರಿತು ಬೂತ್ ಮಟ್ಟದ ಪ್ರಮುಖರ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕೆ ಮತದಾರರ ಪಟ್ಟಿಯೇ ಆಧಾರಸ್ತಂಭವಾಗಿರುತ್ತದೆ. ಈ ಪಟ್ಟಿಯಲ್ಲಿ ದೋಷಗಳು, ನಕಲಿ ಹೆಸರುಗಳು, ದ್ವಂದ್ವ ಅಥವಾ ಡಬಲ್ ನೋಂದಣಿ, ಅನರ್ಹರ ಹೆಸರುಗಳು ಇದ್ದರೆ ಚುನಾವಣೆಯ ಪಾರದರ್ಶಕತೆ ಹಾಗೂ ನೈತಿಕತೆ ಮೇಲೆ ಪ್ರಶ್ನೆ ಚಿಹ್ನೆ ಮೂಡುತ್ತದೆ. ಹೀಗಾಗಿ ಎಸ್ ಐಆರ್ ಅಗತ್ಯವಿದೆ. ಇದು ಸಂವಿಧಾನಬದ್ಧ ಮತದಾನದ ಹಕ್ಕಿನ ಗೌರವ ಕಾಪಾಡುವ ಪವಿತ್ರ ಕಾರ್ಯವಾಗಿದೆ. ಮತದಾರರ ಪಟ್ಟಿ ಶುದ್ಧವಾಗಿದ್ದರೆ ಮಾತ್ರ ಸರಿಯಾದ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ಪ್ರತಿ ಮತದಾರರ ಮತಕ್ಕೂ ಸಮಾನ ಮೌಲ್ಯ ಇರಬೇಕು. ಅನರ್ಹ ಮತದಾರರು ಪಟ್ಟಿಯಲ್ಲಿ ಉಳಿದರೆ ಅರ್ಹರ ಹಕ್ಕು ಹಾನಿಯಾಗುತ್ತದೆ. ಇದನ್ನು ತಡೆಯಲು ಎಸ್ ಐಆರ್ ಪರಿಣಾಮಕಾರಿ ಸಾಧನವಾಗಿದೆ. ಹೀಗಾಗಿ ಅರ್ಹರಿಗೆ ಮತದಾನದ ಹಕ್ಕು ಸಿಗಬೇಕು. ಅನರ್ಹರಿಗೆ ಕೊಕ್ ಆಗಬೇಕು. ಇದು ನಮ್ಮೆಲ್ಲರ ಘೋಷಣೆ, ಧ್ಯೇಯವಾಕ್ಯ ಆಗಬೇಕು ಎಂದು ಹೇಳಿದರು.
ಕೇಂದ್ರ ಚುನಾವಣಾ ಆಯೋಗ ಕೈಗೊಂಡ ಎಸ್‌ಐ ಆರ್ ಬಹಳ ದಿಟ್ಟ ಹಾಗೂ ಶ್ಲಾಘನೀಯ ಕಾರ್ಯವಾಗಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಇದು ಬಹಳ ಯಶಸ್ವಿಯಾಗಿ ನಡೆದಿದೆ. ಇದು ನಮ್ಮಲ್ಲಿಯೂ ಯಶಸ್ವಿಯಾಗಿ ನಡೆಯುವಲ್ಲಿ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಮತಪಟ್ಟಿ ಶುದ್ಧೀಕರಣದ ಮೂಲಕ ಅನರ್ಹ ಮತದಾರರಿಗೆ ‘ಕೊಕ್’ ನೀಡುವ ಕ್ರಮ ಜನತಂತ್ರದ ಹಿತದಿಂದ ಕೂಡಿದೆ. ಎಸ್ ಐಆರ್ ನಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಹೆಚ್ಚಾಗಲಿದೆ. ತಂತ್ರಜ್ಞಾನ ಬಳಸಿಕೊಂಡು ಮತದಾರರ ನಿಖರ ಪರಿಶೀಲನೆ ನಡೆಸಲಾಗುತ್ತಿದೆ. ಮನೆ ಮನೆಗೆ ಭೇಟಿ, ದಾಖಲೆಗಳ ಪರಿಶೀಲನೆ, ಆನ್‌ಲೈನ್ ತಿದ್ದುಪಡಿ ವ್ಯವಸ್ಥೆ, ಇವೆಲ್ಲವೂ ಪಾರದರ್ಶಕತೆ ತೋರಿಸುತ್ತದೆ. “ಶುದ್ಧ ಮತಪಟ್ಟಿ ಎಂದರೆ ಶುದ್ಧ ಚುನಾವಣೆ” ಎಂಬುದು ಪ್ರತಿಯೊಬ್ಬರೂ ಅರಿಯಬೇಕು. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಆಶಯ ಸಹ ಇದೇ ಆಗಿತ್ತು ಎಂದರು.
ಶುದ್ಧ ಚುನಾವಣೆ ಎಂದರೆ ಬಲಿಷ್ಠ ಪ್ರಜಾಪ್ರಭುತ್ವ. ಇದಕ್ಕೆ ಎಸ್ ಐಆರ್ ಪ್ರಮುಖ ಕೊಂಡಿಯಾಗಿದೆ. ನಮ್ಮ ಸಂವಿಧಾನ ಸಮಾನತೆ, ನ್ಯಾಯ ಮತ್ತು ಪಾರದರ್ಶಕತೆ ಒತ್ತಿ ಹೇಳುತ್ತದೆ. ಎಸ್ ಐಆರ್ ಸಹ ಈ ಮೌಲ್ಯಗಳನ್ನು ಜಾರಿಗೆ ತರುತ್ತದೆ. ಪ್ರತಿ ನಾಗರಿಕನು ತನ್ನ ಮತದಾರರ ವಿವರಗಳನ್ನು ಪರಿಶೀಲಿಸಿ, ಯಾವುದೇ ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಹೊಸ ಮತದಾರರು ನೋಂದಣಿ ಮಾಡಿಸಿಕೊಳ್ಳಬೇಕು. ಇದು ಕೇವಲ ಹಕ್ಕಲ್ಲ. ಇದು ನಮ್ಮ ಹೊಣೆಗಾರಿಕೆಯೂ ಆಗಿದೆ.
“ನಾವು ಪ್ರಜಾಪ್ರಭುತ್ವದ ಲಾಭ ಪಡೆಯುತ್ತಿದ್ದೇವೆ ಎಂದರೆ ಅದರ ಸಂರಕ್ಷಣೆಯಲ್ಲೂ ನಮ್ಮ ಪಾತ್ರ ಇರಲೇಬೇಕು. ಎಸ್ ಐಆರ್ ಪ್ರಕ್ರಿಯೆಗೆ ಸಹಕರಿಸುವುದು ದೇಶ ಸೇವೆ ಕೆಲಸವಾಗಿದೆ ಎಂದು ಬೆಲ್ದಾಳೆ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಗುರುನಾಥ ರಾಜಗೀರ ಸೇರಿದಂತೆ, ಶಿವಾನಂದ ಮಂಠಾಳಕರ, ಪೀರಪ್ಪ ಯರನಳ್ಳಿ, ಮಹಾದೇವ ಹಸುರೆ, ರಾಜಶೇಖರ ನಾಗಮೂರ್ತಿ, ಪ್ರಭುಶೆಟ್ಟಿ ಮೆಂಘಾ, ರಾಜಕುಮಾರ ಪಾಟೀಲ್, ಶಕುಂತಲಾ ಬೆಲ್ದಾಳೆ, ಚಂದ್ರಯ್ಯ ಸ್ವಾಮಿ, ಸಂಜುಕುಮಾರ ಕೋಳಿ, ಹಣಮಂತರಾವ ಪಾಟೀಲ, ಶ್ರೀನಿವಾಸ ಪೊದ್ದಾರ, ಸುರೇಶ ಮಾಶೆಟ್ಟಿ, ಹೇಮಾ ತುಕ್ಕಾರೆಡ್ಡಿ, ಬಸವರಾಜ ಪವಾರ್, ಚಂದ್ರಶೇಖರ ಶೇಖಾಪುರ, ಸಂತೋಷಿ ನಿಡವಂಚಾ, ಹಣಮಂತರಾವ ಮೈಲಾರೆ, ಮಲ್ಲಿಕಾರ್ಜುನ ಪಾಟೀಲ, ಜಗನಾಥ್ ಪಾಟೀಲ, ಶಿವಕುಮಾರ ಸ್ವಾಮಿ, ಸಂತೋಷ ರೆಡ್ಡಿ, ಕುಶಲ ಯಾಬಾ, ಬಾಬು ಮಲ್ಕಾಪುರ, ಜೋಸೆಫ್ ಕೊಡ್ಡೆಕರ್, ಶಿವಕುಮಾರ ಪಾಟೀಲ, ಗುಂಡಪ್ಪ ಬುಧೇರಾ, ರವಿ ಸ್ವಾಮಿ, ಶಿವಕಾಂತ ಶೇಖಾಪುರ, ಜನಾರ್ದನ ರೆಡ್ಡಿ ಹಾಗೂ ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.

ಇದರೊಂದಿಗೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಬಿಎಲ್‌ಎ-೧ , ಬಿಎಲ್‌ಎ-೨ , ವಿಧಾನಸಭಾ ಟೋಳಿ ಪ್ರಮುಖರು, ಮಂಡಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು** ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಜನರಿಗೆ ಕಾಂಗ್ರೆಸ್ ದಿಶಾಭೂಲ್

ಎಸ್ ಐಆರ್ ಕುರಿತು ಕಾಂಗ್ರೆಸ್ ವಿನಾಕಾರಣ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಈ ವಿಷಯದಲ್ಲಿ ಸುಳ್ಳು ವಿಷಯ ಹರಡುತ್ತ ಕೆಲ ಸಂಘ, ಸಂಸ್ಥೆಯವರಿಗೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಿಡಿಕಾರಿದರು. ಎಸ್ ಐಆರ್ ಮೂಲಕ ಬಡವರ, ಹಿಂದುಳಿದವರ ಮತದ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂದು ಬೊಬ್ಬೆ ಹಾಕಿ ಜನರಿಗೆ ದಿಶಾಭೂಲ್ ಮಾಡುವ ಜೊತೆಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೂ ದುರ್ಬಲ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಎಸ್ ಐಆರ್ ನಡೆಯುತ್ತಿದೆ. ಇದಕ್ಕೂ ವಿರೋಧಿಸಿದರೆ ಹೇಗೆ? ಮತದಾರರ ಪಟ್ಟಿ ಪಾರದರ್ಶಕ ಹಾಗೂ ಶುದ್ಧವಾಗಿ ಇರುವುದು ಬೇಡವೆ? ಎಸ್ ಐಆರ್ ಗೆ ವಿರೋಧಿಸುವವರು ಪರೋಕ್ಷವಾಗಿ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿರೋಧಿಸಿದಂತಾಗಲಿದೆ ಎಂದು ಬೆಲ್ದಾಳೆ ಆಕ್ರೋಶ ವ್ಯಕ್ತಪಡಿಸಿದರು.


ಎಸ್ ಐಆರ್ ಬಗ್ಗೆ ಕಾಂಗ್ರೆಸ್ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಯಾವುದೇ ಸುಧಾರಣೆ ಬೇಕಿಲ್ಲ ಎಂಬುದನ್ನು ಈ ಮೂಲಕ ಕಾಂಗ್ರೆಸ್ ಸಾಬೀತು ಮಾಡುತ್ತಿದೆ. ಸಮಾಜದ ಜವಾಬ್ದಾರಿಯುತ ಪ್ರತಿಯೊಬ್ಬ ನಾಗರಿಕರು ಎಸ್ ಐಆರ್ ಗೆ ವಿರೋಧ ಮಾಡುತ್ತಿರುವವರ ಬಣ್ಣ ಬಯಲು ಮಾಡಬೇಕು.
-ಸೋಮನಾಥ ಪಾಟೀಲ್

ಬಿಜೆಪಿ ಜಿಲ್ಲಾ ಅಧ್ಯಕ್ಷ

ಎಸ್ ಐಆರ್ ಬಹಳ ಮಹತ್ವದ ಅಭಿಯಾನವಾಗಿದೆ. ಯಾರೂ ಇದನ್ನು ಲಘುವಾಗಿ ಪರಿಗಣಿಸಬಾರದು. ಮತದಾರರ ಪಟ್ಟಿ ಶುದ್ಧಗೊಳಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಈ ಅಭಿಯಾನ ಯಶಸ್ವಿಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
-ಶಿವಾನಂದ ಮಂಠಾಳಕರ್
ಹಿರಿಯ ಬಿಜೆಪಿ ಮುಖಂಡ