
ಪರಿಷತ್ ಚುನಾವಣಾ ಅಖಾಡ
ಬೆಂಗಳೂರು, ಜೂ. ೧೬- ನಾಳೆ ನಡೆಯಲಿರುವ ವಿಧಾನಪರಿಷತ್‌ನ ೭ ಸ್ಥಾನಗಳ ಚುನಾವಣೆ ರಂಗೇರಿದ್ದು, ೭ನೇ ಸ್ಥಾನದ ಅಭ್ಯರ್ಥಿಯ ಗೆಲುವು ಕುತೂಹಲ ಮೂಡಿಸಿದ್ದು, ೭ನೇ ಸ್ಥಾನಕ್ಕೆ ಕಾಂಗ್ರೆಸ್‌ನ ೫ನೇ ಅಭ್ಯರ್ಥಿ ಹಾಗೂ ಜೆಡಿಎಸ್ ಅಭ್ಯರ್ಥಿ ನಡುವೆ ಪೈಪೋಟಿ ಇದ್ದು, ಗೆಲುವು ಯಾರಿಗೆ ಧಕ್ಕಲಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಪಕ್ಷ ೭ನೇ ಸ್ಥಾನಕ್ಕಾಗಿ ತನ್ನ ೫ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದ್ದು, ಬಿಜೆಪಿ ಬೆಂಬಲ ಪಡೆದು ಜೆಡಿಎಸ್ ೭ನೇ ಸ್ಥಾನದ ಅಭ್ಯರ್ಥಿಯಾಗಿ ಗೋವಿಂದರಾಜು ಅವರನ್ನು ಕಣಕ್ಕಿಳಿಸಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ತನಗಿರುವ ಶಾಸಕರ ಸಂಖ್ಯಾಬಲ, ಪಕ್ಷೇತರರಿಬ್ಬರು ಹಾಗೂ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಇಬ್ಬರು ಶಾಸಕರ ನೆರವಿನಿಂದ ಐದು ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಪ್ರತಿ ಅಭ್ಯರ್ಥಿಯ ಗೆಲುವಿಗೆ ೨೮ ಮತಗಳ ಅಗತ್ಯವಿದ್ದು, ಕಾಂಗ್ರೆಸ್ ತನ್ನ ನಾಲ್ವರು ಅಧಿಕೃತ ಅಭ್ಯರ್ಥಿಗಳಿಗೆ ತಲಾ ೨೯ ಮತಗಳನ್ನು ಹಂಚುವ ಸಾಧ್ಯತೆ ಇದ್ದು, ಹೀಗೆ ೨೯ ಮತ ಹಂಚಿದರೆ ಐದನೆ ಅಭ್ಯರ್ಥಿ ಗೆಲುವಿಗೆ ೩ ಮತಗಳು ಕಡಿಮೆಯಾಗಲಿವೆ.
ಜೆಡಿಎಸ್ ಪಕ್ಷ ಸಹ ತನ್ನ ೧೮ ಶಾಸಕರು, ಬಿಜೆಪಿಯ ಐವರು ಬಿಜೆಪಿಯಿಂದ ಉಚ್ಛಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ಸೇರ್ಪಡೆಯಾಗಿರುವ ಜನಾರ್ಧನರೆಡ್ಡಿ ಅವರ ಬೆಂಬಲ ಪಡೆದರೂ ಗೆಲುವಿಗೆ ೩ ಮತಗಳ ಕೊರತೆ ಎದುರಾಗಲಿದೆ.
ಈ ಮತಗಳ ಕೊರತೆಯನ್ನು ನೀಗಿಸಿಕೊಳ್ಳಲು ಎರಡೂ ಪಕ್ಷಗಳು ಅಡ್ಡ ಮತದಾನದ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಶಾಸಕರ ಒಗ್ಗಟ್ಟನ್ನು ಕಾಯ್ದುಕೊಂಡು ಅಡ್ಡ ಮತದಾನವಾಗದಂತೆ ನೋಡಿಕೊಳ್ಳಲು ಎಲ್ಲ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ತಂತ್ರ ನಡೆಸಿವೆ.
ಕಾಂಗ್ರೆಸ್ ಪಕ್ಷ ನಿನ್ನೆಯೇ ತನ್ನ ಎಲ್ಲ ಶಾಸಕರನ್ನ ಬಿಡದಿಯ ಖಾಸಗಿ ರೆಸಾರ್ಟ್‌ಗೆ ಕರೆದೊಯ್ದು ಅಲ್ಲೆಯೇ ನಿನ್ನೆ ಸಂಜೆಯೇ ಶಾಸಕಾಂಗ ಪಕ್ಷದ ಸಭೆ ನಡೆಸಿ ಎಲ್ಲ ಶಾಸಕರಿಗೂ ಸೂಕ್ತ ನಿರ್ದೇಶನ ನೀಡಿದೆ.
ಜೆಡಿಎಸ್ ಇಂದು ಸಂಜೆ ತನ್ನ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಸಾಧ್ಯತೆ ಇದೆ.
ಶಬರಿಮಲೆ ಯಾತ್ರೆ ಮುಗಿಸಿಕೊಂಡು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಿನ್ನೆ ರಾತ್ರಿಯಷ್ಟೆ ಬೆಂಗಳೂರಿಗೆ ಬಂದಿದ್ದು, ಇಂದು ಅವರು ತಮ್ಮ ಅಭ್ಯರ್ಥಿ ಗೆಲುವಿಗೆ ಏನೆಲ್ಲಾ ಬೇಕು ಆ ತಂತ್ರಗಳನ್ನು ಮಾಡುತ್ತಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್‌ನಿಂದ ಅಡ್ಡ ಮತದಾನವಾದರೆ ಮಾತ್ರ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧ್ಯ. ಇಲ್ಲದಿದ್ದರೆ ಕಾಂಗ್ರೆಸ್‌ನ ಐದನೇ ಅಭ್ಯರ್ಥಿಯೇ ಗೆಲ್ಲುವ ಸಾಧ್ಯತೆ ಇದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹ ರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಟಿ.ವಿ. ಮೋಹನ್, ಮಳವಳ್ಳಿವಿಶ್ವಣ್ಣ, ತಿಪ್ಪಣ್ಣ ಕಮಕನೂರು ಹಾಗೂ ವಿನಯ್ ಕಾರ್ತಿಕ್ ಕಣಕ್ಕಿಳಿಸಿದ್ದಾರೆ.
ಬಿಜೆಪಿಯಿಂದ ಲಂಗರಾಜಪಾಟೀಲ್ ಹಾಗೂ ರಘು ಕೌಟಿಲ್ಯ, ಜೆಡಿಎಸ್‌ನಿಂದ ಗೋವಿಂದರಾಜು ಕಣದಲ್ಲಿದ್ದಾರೆ. ೭ನೇ ಸ್ದಾನದ ಗೆಲುವಿಗೆ ಪೈಪೋಟಿ ಇದೆ.
ನಾಳೆ ಬೆಳಗ್ಗೆ ೮ ರಿಂದ ಸಂಜೆ ೪ ರವರೆಗೆ ಮತದಾನ ನಡೆಯಲಿದ್ದು, ಸಂಜೆ ೫ ರ ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.





























