Home ಜಿಲ್ಲೆ ಸಂವಿಧಾನವೇ ದೇಶದ ಧರ್ಮಗ್ರಂಥ : ಎಸ್.ಬಿ. ಕುಚಬಾಳ

ಸಂವಿಧಾನವೇ ದೇಶದ ಧರ್ಮಗ್ರಂಥ : ಎಸ್.ಬಿ. ಕುಚಬಾಳ

ಬೀದರ, ಜೂ ೧೭: ಡಾ. ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನವೇ ದೇಶದ ನಿಜವಾದ ಧರ್ಮಗ್ರಂಥವಾಗಿದ್ದು, ಅದು ಭಾರತೀಯರ ರಕ್ಷಾ ಕವಚವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಎಸ್.ಬಿ. ಕುಚಬಾಳ ಅಭಿಪ್ರಾಯಪಟ್ಟರು.
ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಭೀಮರಾಜ ಸಾಹಿತ್ಯ ಪರಿಷತ್, ಬೀದರ ವತಿಯಿಂದ ಮಂಗಳವಾರ ಆಯೋಜಿಸಲಾದ ಬುದ್ಧ, ಬಸವ, ಅಂಬೇಡ್ಕರ ಸಾಂಸ್ಕೃತಿಕ ಉತ್ಸವ ಹಾಗೂ ಸಂವಿಧಾನ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ವಿವಿಧ ಜಾತಿ, ಧರ್ಮಗಳ ಜನರು ವಾಸಿಸುತ್ತಿದ್ದು, ಪ್ರತಿಯೊಬ್ಬರಿಗೂ ತಮ್ಮದೇ ಆದ ಧರ್ಮಗ್ರಂಥಗಳಿವೆ. ಆದರೆ ದೇಶದ ಎಲ್ಲ ನಾಗರಿಕರನ್ನು ಸಮಾನವಾಗಿ ಕಾಣುವ ಸಂವಿಧಾನವೇ ಭಾರತದ ಧರ್ಮಗ್ರಂಥವಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಹಕ್ಕುಗಳನ್ನು ಕಾಪಾಡುವ ರಕ್ಷಾ ಕವಚವಾಗಿದ್ದು, ಸಮಾನತೆ ಹಾಗೂ ನ್ಯಾಯವನ್ನು ಒದಗಿಸುತ್ತದೆ ಎಂದು ಹೇಳಿದರು.
ಸಂವಿಧಾನವು ಸರ್ವರ ಹಿತವನ್ನು ಕಾಪಾಡುವುದರ ಜೊತೆಗೆ ಸಮಾನ ಅವಕಾಶಗಳನ್ನು ನೀಡುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜದ ಮುಖಂಡ ಶಂಕರರಾವ ದೊಡ್ಡಿ ಮಾತನಾಡಿ, ಸಂವಿಧಾನವು ಕೇವಲ ದಲಿತ ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಎಲ್ಲ ಧರ್ಮ, ಜಾತಿ ಹಾಗೂ ವರ್ಗಗಳ ಜನರಿಗೆ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಒದಗಿಸಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಸಂದೀಪ್ ಕಾಂಟೆ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನವೇ ನಮ್ಮ ಉಸಿರಾಗಿದ್ದು, ಅದರ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜ ಸೇವಕ ಸುರೇಶ್ ಜೋಜನಾಕರ್ ಮಾತನಾಡಿ, ಎಲ್ಲರ ಹಿತ ಕಾಪಾಡುತ್ತಿರುವ ಸಂವಿಧಾನವನ್ನು ಕೆಲವರು ಬದಲಾಯಿಸಲು ಯತ್ನಿಸುತ್ತಿದ್ದಾರೆ. ಆದರೆ ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಲಬುರಗಿಯ ಅಮ್ರಪಾಲಿ ಬುದ್ಧ ವಿಹಾರದ ಪೂಜ್ಯ ಭಂತೆ ಧಮ್ಮಜ್ಯೋತಿ ವಹಿಸಿದ್ದರು. ಭೀಮರಾಜ ಸಾಹಿತ್ಯ ಪರಿಷತ್ ಅಧ್ಯಕ್ಷ ತಾತ್ಯಾರಾವ ಕೆ. ಮಾರ್ಥಂಡ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಡಿ.ಎಸ್.ಎಸ್. ಅಧ್ಯಕ್ಷ ಅರುಣ ಪಟೇಲ್, ಶಕ್ತಿ ಕನ್ನಡ ದಿನಪತ್ರಿಕೆಯ ಸಂಪಾದಕ ಶಕ್ತಿಕಾಂತ ಬಾವಿದೊಡ್ಡಿ, ನಿವೃತ್ತ ಪ್ರಾಂಶುಪಾಲ ಎಂ.ಡಿ. ನಿಝಾಮ್, ಆಲ್ ಇಂಡಿಯಾ ಬುದ್ಧಿಷ್ಟ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಪ್ರಸನ್ನ ಡಾಂಗೆ ಹಾಗೂ ಹಿರಿಯ ಸಮಾಜ ಸೇವಕ ಸುಧಾಕರ ಎಕಂಬೇಕರ್ ಉಪಸ್ಥಿತರಿದ್ದರು.
ನಿವೃತ್ತ ಗ್ರಂಥಪಾಲಕ ಬಸವರಾಜ ದಾಂಡೇಕರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿವಿಧ ಕಲಾ ತಂಡಗಳಿAದ ಸಾಂಸ್ಕೃತಿಕ ಉತ್ಸವ ಜರುಗಿತು. ೧೫ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ ಹಾಡು, ತತ್ವಪದ, ಕೋಲಾಟ ಹಾಗೂ ಜಾನಪದ ಗೀತೆಗಳ ಮೂಲಕ ಪ್ರೇಕ್ಷಕರ ಮನಗೆದ್ದವು.