Home ಜಿಲ್ಲೆ ಬೆಂಗಳೂರು ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆ

ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆ

ಬೆಂಗಳೂರು, ಜು.೨೩: ರಾಷ್ಟ್ರೀಯ ಹೆದ್ದಾರಿ ೬೯ರ ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಪ್ರಾರಂಭಿಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ನೀಡಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.


ರಸ್ತೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿರುವ ಅವರು, ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಅನುಮೋದನೆ ನೀಡುವಂತೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ ಗಡ್ಕರಿ ಅನುಮೋದನೆ ಭರವಸೆ ನೀಡಿದ್ದರು.ಅದರಂತೆ ಇದೀಗ ೫೮೪.೯೮ ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಕಾಮಗಾರಿಗೆ ಆದೇಶ ಹೊರಡಿಸಿದೆ ಎಂದು ಹೇಳಿದ್ದಾರೆ.


ಬಡವನಹಳ್ಳಿಯಿಂದ ಬೈರೆನಹಳ್ಳಿ ಭಾಗದ ೩೨ ಕಿ.ಮಿ. ಚತುಷ್ಪಥ ರಸ್ತೆಗೆ ರೂ.೧೦೦೦ ಕೋಟಿ ಅನುಮೋದನೆ ಪಡೆಯುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು ಮುಂದಿನ ದಿವಸಗಳಲ್ಲಿ ಕೇಂದ್ರ ರ್‍ಕಾರದಿಂದ ಮಂಜೂರಾತಿ ಪಡೆಯಲಾಗುವುದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.


ಪ್ರಸ್ತುತ ಶಿರಾದಿಂದ- ತುಮಕೂರು ದಾಬಸಪೇಟೆ ಕೋಲಾರ ಮಾರ್ಗವಾಗಿ ತಿರುಪತಿಗೆ ತಲುಪಲು ಸುಮಾರು ೬ ರಿಂದ ೭ ಗಂಟೆಗಳ ಪ್ರಯಾಣದ ಅವಧಿ ಇದ್ದು,ಈ ಹೆದ್ದಾರಿ ನಿರ್ಮಾಣದಿಂದ ಶಿರಾದಿಂದ ಮಧುಗಿರಿ, ಚಿಕ್ಕಬಳ್ಳಾಪುರ ಚಿಂತಾಮಣಿ ಮಾರ್ಗವಾಗಿ ತಿರುಪತಿಗೆ ಕೇವಲ ೪ ಗಂಟೆಯ ಅವಧಿಯಲ್ಲಿ ತಲುಪಲು ಅನೂಕೂಲವಾಗಲಿದೆ.ಜೊತೆಗೆ ಶಿರಾದಿಂದ ತಿರುಪತಿಗೆ ಸುಮಾರು ೬೦ ಕಿ.ಮಿ. ರಸ್ತೆ ಪ್ರಯಾಣ ಕಡಿಮೆಯಾಗಲಿದೆ.ಇದಲ್ಲದೆ ವಸಂತನರಸಾಪುರ ಹಾಗೂ ಶಿರಾ ಕೈಗಾರಿಕಾ ಪ್ರದೇಶಗಳಿಗೆ ಚೆನೈ ಬಂದರಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಿದೆ.ಈ ಹೆದ್ದಾರಿ ಶಿರಾ-ಬೆಂಗಳೂರಿನ ನಡುವಿನ ಪರ್ಯಾಯ ರಸ್ತೆ ಸಂಪರ್ಕವಾಗಲಿದೆ ಎಂದು ಕೇಂದ್ರ ಸಚಿವ ಹಾಗೂ ತುಮಕೂರು ಲೋಕಸಭಾ ಸದಸ್ಯ ವಿ.ಸೋಮಣ್ಣ ತಿಳಿಸಿದ್ದಾರೆ.


ತುಮಕೂರು ಜಿಲ್ಲೆಯ ಅಭಿವೃದ್ದಿಗೆ ನಿರಂತರ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನೀತಿನ್ ಗಡ್ಕರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಅಭಿನಂದನೆ ಸಲ್ಲಿಸಿದ್ದಾರೆ.