Home ಜಿಲ್ಲೆ ಬೆಂಗಳೂರು ಪಾದಚಾರಿ ಮಾರ್ಗದಲ್ಲಿ ಬೈಕ್ ಓಡಿಸಿದರೆ ೫,೦೦೦ ದಂಡ

ಪಾದಚಾರಿ ಮಾರ್ಗದಲ್ಲಿ ಬೈಕ್ ಓಡಿಸಿದರೆ ೫,೦೦೦ ದಂಡ

ಬೆಂಗಳೂರು, ಜು.೨೩: ನಗರದ ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ಹಾಗೂ ಇತರೆ ಮೋಟಾರು ವಾಹನಗಳನ್ನು ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಇರುವ ೫೦೦ ದಂಡವನ್ನು ೫,೦೦೦ಕ್ಕೆ ಹೆಚ್ಚಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆಯುವುದಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.


ನಗರ ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ತೆರವಾದ ಫುಟ್‌ಪಾತ್‌ಗಳಲ್ಲಿ ವಾಹನಗಳು ಸಂಚರಿಸುವುದು ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದರು.


ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವುದರಿಂದ ಪಾದಚಾರಿಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ. ಅಪಘಾತಗಳು ಸಂಭವಿಸಿದರೆ ಅದರ ಹೊಣೆ ಯಾರು ಎಂಬ ಪ್ರಶ್ನೆ ಎತ್ತಿದ ಅವರು, ಇಂತಹ ಪ್ರಕರಣಗಳಲ್ಲಿ ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.


ಇದೇ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಆಲ್ಟರ್ನೇಟ್ ಪಾರ್ಕಿಂಗ್ ಹಾಗೂ ಒನ್-ಸೈಡ್ ಪಾರ್ಕಿಂಗ್ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಿಯಮ ಪಾಲನೆಯಿಂದ ರಸ್ತೆಯ ಒಂದು ಬದಿಯಲ್ಲಿ ೭-೮ ಅಡಿ ಹೆಚ್ಚುವರಿ ಜಾಗ ದೊರೆಯಲಿದ್ದು, ವಾಹನ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.


ಸಿಗ್ನಲ್‌ಗಳು ಹಾಗೂ ಜಂಕ್ಷನ್‌ಗಳ ಸಮೀಪ ಬಸ್ ನಿಲ್ದಾಣಗಳಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಆದ್ದರಿಂದ ಸಿಗ್ನಲ್‌ನಿಂದ ೭೫ ಮೀಟರ್ ಹಾಗೂ ಜಂಕ್ಷನ್‌ನಿಂದ ೫೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಬಸ್ ನಿಲ್ದಾಣ ಇರದಂತೆ ಕ್ರಮ ಕೈಗೊಂಡು, ಅಗತ್ಯವಿದ್ದರೆ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಸಭೆಯಲ್ಲಿ ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರಾದ ಲತಾ ಆರ್, ಲೋಖಂಡೆ ಸ್ನೇಹಲ್ ಸುಧಾಕರ್, ಕವಿತಾ ರಾಜಾರಾಂ, ವೆಂಕಟ ಚಲಪತಿ, ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.