
ಕಲಬುರಗಿ,ಜು.23-ಬೈಕ್ನ ಡಿಕ್ಕಿಯಲ್ಲಿಟ್ಟಿದ್ದ 6 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು 10 ಸಾವಿರ ರೂ.ನಗದು ಕಳವಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಅನ್ನಪೂರ್ಣ ಸಂತೋಷ ಕುಲಕರ್ಣಿ ಅವರು ಸಂಬಂಧಿಕರ ಮದುವೆ ಕಾರ್ಯಕ್ರಮ ಇದ್ದ ಪ್ರಯುಕ್ತ ರಾಘವೇಂದ್ರ ನಗರ ಕಾಲೋನಿಯಲ್ಲಿರುವ ಬ್ಯಾಂಕಿನ ಲಾಕರ್ನಲ್ಲಿ ಇರಿಸಿದ್ದ 1.50 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಚಪ್ಲಾರ್, 50 ಸಾವಿರ ರೂ.ಮೌಲ್ಯದ 10 ಗ್ರಾಂ.ಉಂಗುರ, 50 ಸಾವಿರ ರೂ.ಮೌಲ್ಯದ 5 ಗ್ರಾಂ.ನ ಎರಡು ಬಂಗಾರದ ಕಿವಿಯೋಲೆ, 50 ಸಾವಿರ ರೂ.ಮೌಲ್ಯದ 5 ಗ್ರಾಂ.ನ ಎರಡು ಬಂಗಾರದ ಉಂಗುರ, 10 ಸಾವಿರ ರೂ.ನಗದನ್ನು ತೆಗೆದುಕೊಂಡು ಬೈಕ್ನ ಡಿಕ್ಕಿಯಲ್ಲಿಟ್ಟುಕೊಂಡು ಶರಣಬಸವೇಶ್ವರ ದೇವಸ್ಥಾನ ಹತ್ತಿರದ ಬ್ಯಾಂಕಿನ ಎದರುಗಡೆ ನಿಲ್ಲಿಸಿದ್ದಾರೆ. ನಂತರ ಅವರು ಬ್ಯಾಂಕಿನ ಒಳಗೆ ಹೋಗಿ ಬರುವುದರೊಳಗೆ ಬೈಕ್ನ ಡಿಕ್ಕಿಯಲ್ಲಿಟ್ಟಿದ್ದ 6 ಲಕ್ಷ ರೂ.ಮೌಲ್ಯದ 60 ಗ್ರಾಂ.ಬಂಗಾರದ ಆಭರಣ ಮತ್ತು 10 ಸಾವಿರ ರೂ.ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಅನ್ನಪೂರ್ಣ ಕುಲಕರ್ಣಿ ಅವರು ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.































