
ಜೈಪುರ, ನ.೧: ಖಾಸಗಿ ಕಂಪನಿಯೊಂದಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಸ್ವಂತ ಕುಟುಂಬದ ಸದಸ್ಯರಿಗೆ ಲಾಭ ಮಾಡಿಕೊಡಲು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಶಿಖರ್ ಅಗರ್ವಾಲ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಾಥಮಿಕ ತನಿಖೆ ಆರಂಭಿಸಿದೆ.
ಇದರ ಬೆನ್ನಲ್ಲೇ ಅವರ ಪತ್ನಿ, ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ಅವರನ್ನು ರಾಜಸ್ಥಾನ ಸರ್ಕಾರ ಹುದ್ದೆ ನಿರೀಕ್ಷೆಯಲ್ಲಿರಿಸಿದೆ (ಎಪಿಒ). ೧೯೯೫ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ಅವರು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ಯೋಜನೆ, ಆಧುನೀಕರಣ ಮತ್ತು ಕಲ್ಯಾಣ ವಿಭಾಗದ ಜವಾಬ್ದಾರಿ ನಿರ್ವಹಿಸುತ್ತಿದ್ದರು.
೧೯೯೩ನೇ ಬ್ಯಾಚ್ನ ಐಎಎಸ್ ಅಧಿಕಾರಿ ಶಿಖರ್ ಅಗರ್ವಾಲ್ ಅವರು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರನ್ನು ಕೂಡ ಎಪಿಒಗೆ ಒಳಪಡಿಸಲಾಗಿತ್ತು.
ಪ್ರಶಾಖಾ ಮಾಥುರ್ ವಿರುದ್ಧ ಸರ್ಕಾರ ಕ್ರಮ ಕೈಗೊಂಡ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಎಸಿಬಿ, ಸದ್ಯದ ತನಿಖೆ ಶಿಖರ್ ಅಗರ್ವಾಲ್ ಅವರಿಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದೆ.
ಗೋಯಲ್ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೋಟೆಲ್ ಮತ್ತು ರೆಸಾರ್ಟ್ ಸಂಸ್ಥೆಗೆ ಅನುಕೂಲ ಮಾಡಿಕೊಡುವ ಮೂಲಕ ಅಗರ್ವಾಲ್ ಅವರು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಯುತ್ತಿದೆ.
ಪ್ರಶಾಖಾ ಮಾಥುರ್ ವಿರುದ್ಧ ಈವರೆಗೆ ಯಾವುದೇ ಅಧಿಕೃತ ತನಿಖೆ ಘೋಷಿಸಲಾಗಿಲ್ಲ. ಆದರೆ, ಅಗತ್ಯಬಿದ್ದರೆ ತನಿಖೆಯ ವ್ಯಾಪ್ತಿಯನ್ನು ಅವರಿಗೂ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಎಸಿಬಿಯ ಪ್ರಾಥಮಿಕ ತನಿಖೆಯ ಪ್ರಕಾರ, ಅಗರ್ವಾಲ್ ದಂಪತಿ ಉದಯಪುರ ಮತ್ತು ಅಲ್ವಾರ್ನಲ್ಲಿರುವ ಗೋಯಲ್ ಫ್ಯಾಷನ್ಸ್ ಸಂಸ್ಥೆಯಿಂದ ಮಾರುಕಟ್ಟೆ ಬೆಲೆಗಿಂತ ಗಣನೀಯವಾಗಿ ಕಡಿಮೆ ದರದಲ್ಲಿ ಹತ್ತಾರು ವಿಲ್ಲಾಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ, ಐಎಎಸ್ ಅಧಿಕಾರಿ ಅಗರ್ವಾಲ್ ಅವರು ಸಂಸ್ಥೆಯ ನಿರ್ದೇಶಕರೊಂದಿಗೆ ಶಾಮೀಲಾಗಿ ಆ ಕಂಪನಿಗೆ ಅನಗತ್ಯ ಆರ್ಥಿಕ ಲಾಭಗಳನ್ನು ಒದಗಿಸಲು ನೆರವಾಗಿದ್ದಾರೆ ಎಂಬ ಆರೋಪವಿದೆ.
ರೆಸಾರ್ಟ್ಗಳ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳಲ್ಲಿ ವಿನಾಯಿತಿ ನೀಡುವುದು, ಪರಿಶೀಲನೆ ನಡೆಸದೆ ಅನುಮೋದನೆಗಳನ್ನು ನೀಡುವುದು ಹಾಗೂ ವಿಶೇಷ ರಿಯಾಯಿತಿ ಆಧಾರಿತ ಆರ್ಥಿಕ ಪ್ಯಾಕೇಜ್ ಒದಗಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಕಂಪನಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿದೆ.
ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಗಣನೀಯ ಪ್ರಮಾಣದ ನಷ್ಟ ಉಂಟಾಗಿದೆ ಎಂಬುದು ಎಸಿಬಿಯ ವಾದವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಗರ್ವಾಲ್ ವಿರುದ್ಧದ ಆರೋಪಗಳಿಗೆ ಪೂರಕ ಸಾಕ್ಷ್ಯಗಳು ದೊರೆತರೆ ಅವರ ವಿರುದ್ಧ ಅಧಿಕೃತ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವ ಸಾಧ್ಯತೆಯಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯವಿದ್ದಲ್ಲಿ ಪ್ರಶಾಖಾ ಮಾಥುರ್ ಅವರನ್ನೂ ವಿಚಾರಣೆಗೆ ಕರೆಯಬಹುದು ಎಂದು ತನಿಖೆಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ.ಆದರೆ, ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ವಿರುದ್ಧ ಈವರೆಗೆ ಯಾವುದೇ ಅಧಿಕೃತ ತನಿಖೆ ಆರಂಭಿಸಿಲ್ಲ. ಸದ್ಯದ ತನಿಖೆ ಶಿಖರ್ ಅಗರ್ವಾಲ್ ಅವರಿಗೆ i
























