
ಕಲಬುರಗಿ: ವಿದ್ಯುತ್ ಕಳ್ಳತನವು ಕಠಿಣ ಶಿಕ್ಷೆಗೆ ಗುರಿಯಾಗಬೇಕಾದ ಗಂಭೀರ ಆರ್ಥಿಕ ಅಪರಾಧವಾಗಿದೆ. ವಿದ್ಯುತ್ ಕಳ್ಳತನದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಆರ್ಥಿಕ ನಷ್ಟ ಉಂಟಾಗುವುದಲ್ಲದೆ, ರಾಜ್ಯದ ಆರ್ಥಿಕತೆಯ ಮೇಲೆಯೂ ದುಷ್ಪರಿಣಾಮ ಬೀರುತ್ತದಲ್ಲದೆ, ಗ್ರಾಹಕರಿಗೆ ಪೂರೈಸುವ ವಿದ್ಯುತ್ ದರ ಹೆಚ್ಚಳಕ್ಕೂ ಇದು ಒಂದು ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಸಮಾಜವು ಇಂತಹ ಅಪರಾಧದ ಬಗ್ಗೆ ಜಾಗೃತವಾಗಿರಬೇಕು ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ) ಜಾಗೃತ ದಳದ ಕಾರ್ಯನಿರ್ವಾಹಕ ಅಭಿಯಂತರರಾದ ಎಂ. ಎನ್. ಶಿವಕುಮಾರ್ ತಿಳಿಸಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ “ಮುನ್ನೆಚ್ಚರಿಕೆ ಜಾಗೃತ ಕ್ರಮಗಳು” ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತಮ್ಮ ತಮ್ಮ ಪ್ರದೇಶಗಳಲ್ಲಿ ನಡೆಯುವ ವಿದ್ಯುತ್ ಕಳ್ಳತನದ ಬಗ್ಗೆ ಪ್ರತಿಯೊಬ್ಬ ಗ್ರಾಹಕರೂ ಎಚ್ಚರಿಕೆ ವಹಿಸಿ, ಸ್ಥಳೀಯ ಜೆಸ್ಕಾಂ ಕಚೇರಿಗಳಿಗೆ ಮಾಹಿತಿ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಇದರಿಂದ ವಿದ್ಯುತ್ ಕಂಪನಿಗಳಿಗೆ ನಷ್ಟ ಉಂಟುಮಾಡುವ ಪ್ರಮುಖ ಕಾರಣಗಳಲ್ಲಿ ಒಂದಾದ ವಿದ್ಯುತ್ ಪ್ರಸರಣ ನಷ್ಟವನ್ನು ಕಡಿಮೆ ಮಾಡಲು ಜೆಸ್ಕಾಂಗೆ ಸಹಕಾರಿಯಾಗುತ್ತದೆ. ವಿದ್ಯುತ್ ಕಂಪನಿಗಳಿಗೆ ಆಗುವ ಈ ನಷ್ಟವನ್ನು ಅಂತಿಮವಾಗಿ ಗ್ರಾಹಕರಿಂದಲೇ ಹೆಚ್ಚುವರಿ ವಿದ್ಯುತ್ ದರದ ರೂಪದಲ್ಲಿ ಭರಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಕಾರ್ಯಾಗಾರದಲ್ಲಿ ವಿಶ್ವವಿದ್ಯಾಲಯದ ಡೀನ್ ಡಾ. ಶಿವಕುಮಾರ ಜವಳಿಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶಶಿಧರ ಸೊನ್ನದ, ವಿಭಾಗದ ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























