
ವಿಜಯಪುರ, ನ. 1: ಹಳ್ಳಿಗಳು ಸಮಗ್ರವಾಗಿ ಅಭಿವೃದ್ಧಿಯಾದಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಕನಸಿನ ಗ್ರಾಮ ಸ್ವರಾಜ್ಯ ಸಾಕಾರಗೊಳ್ಳಲು ಸಾಧ್ಯ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ನಿಡೋಣಿಯಲ್ಲಿ ಶನಿವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುದಾನದಡಿ ರೂ.65 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ಉತ್ತಮ ಆರೋಗ್ಯ ಸೇವೆ ದೊರೆಯಲು ಇಂತಹ ಆರೋಗ್ಯ ಮಂದಿರಗಳು ಸಹಕಾರಿಯಾಗಲಿವೆ. ಗ್ರಾಮಗಳಲ್ಲಿ ಕೇವಲ ದೇವಸ್ಥಾನಗಳ ನಿರ್ಮಾಣಕ್ಕೆ ಸೀಮಿತವಾಗದೆ, ಆಸ್ಪತ್ರೆಗಳು, ಗ್ರಂಥಾಲಯಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ನಿರ್ಮಾಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ನಿಡೋಣಿಯಲ್ಲಿ ಅಚ್ಚುಕಟ್ಟಾದ ಪಂಚಾಯಿತಿ ಕಟ್ಟಡ ಹಾಗೂ ವಿಶಾಲವಾದ ಗ್ರಂಥಾಲಯ ಉದ್ಘಾಟಿಸಿರುವುದು ಸಂತಸ ತಂದಿದೆ. ಗ್ರಾಮಸ್ಥರಲ್ಲಿ ಓದುವ ಆಸಕ್ತಿ ಕಂಡು ಸಂತೋಷವಾಗಿದೆ. ಗ್ರಂಥಾಲಯದ ಜೊತೆಗೆ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ಜನಪರ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಆರೋಗ್ಯ ಕ್ಷೇತ್ರಕ್ಕೆ ರೂ.25 ಕೋಟಿ ಅನುದಾನ
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಮಾತನಾಡಿ, ಬಬಲೇಶ್ವರ ತಾಲೂಕಿನಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸಚಿವ ಎಂ.ಬಿ. ಪಾಟೀಲ ಅವರು ಸುಮಾರು ರೂ.25 ಕೋಟಿ ಅನುದಾನ ಒದಗಿಸಿದ್ದು, ವಿವಿಧ ಆರೋಗ್ಯ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಭುಲಿಂಗಯ್ಯ ಹಿರೇಮಠ ಶ್ರೀಗಳು, ಮುಖಂಡರಾದ ಶ್ರೀಶೈಲ ಪಾಟೀಲ, ಚನ್ನಪ್ಪ ಕೊಪ್ಪದ, ವಿನಾಯಕ ಕೊಟ್ಟಲಗಿ, ವಿ.ಎಸ್. ಪಾಟೀಲ, ಜುಬೇರ ಪಠಾಣ, ಶಿವಾನಂದ ತೇಲಿ, ಮಹೇಶ ಮಾಳಿ, ಸಾಹೇಬಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಗಸನಹಳ್ಳಿಯಲ್ಲಿ ರೂ.1 ಕೋಟಿ ರಸ್ತೆ ಕಾಮಗಾರಿಗೆ ಚಾಲನೆ
ನಂತರ ಕಾಖಂಡಕಿ ಸಮೀಪದ ಅಗಸನಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ಎಂ.ಬಿ. ಪಾಟೀಲ, ಜಂಕ್ಷನ್ ಅಭಿವೃದ್ಧಿ ಹಾಗೂ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ.1 ಕೋಟಿ ವೆಚ್ಚದಲ್ಲಿ 200 ಮೀಟರ್ ರಸ್ತೆ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಅದೇ ರೀತಿ ಗ್ರಾಮದ ಕನಕದಾಸ ವೃತ್ತದಿಂದ ಪಂಚಾಯಿತಿ ಕಟ್ಟಡದವರೆಗೆ ರೂ.2.50 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ನೀರಾವರಿ ಯೋಜನೆಗಳಿಂದ ರೈತರ ಜಮೀನುಗಳ ಬೆಲೆ ಹೆಚ್ಚಾಗಿದ್ದು, ರೈತರ ಬದುಕು ಹಸನಾಗಿದೆ. ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ವಿವಿಧ ಮುಖಂಡರು, ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು























