Home ಜಿಲ್ಲೆ ಬೆಂಗಳೂರು ೭೨ ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರದ ಆದೇಶ

೭೨ ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರದ ಆದೇಶ

ಬೆಂಗಳೂರು.ನ.೧ –ಪಂಚಾಯ್ತಿ ಮಟ್ಟದ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಶಾಲೆಗಳಂತೆ ರೂಪಿಸಲಾಗುತ್ತಿದೆ. ಈಗಾಗಲೇ ೧೫ ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.


ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ೨೫,೪೯೮ ದ್ವಿಭಾಷಾ ಶಾಲೆಗಳು ಆರಂಭವಾಗಿದೆ. ೨೫೦ ಸರ್ಕಾರಿ ಶಾಲೆಗಳನ್ನು ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ. ೬ನೇ ತರಗತಿಯಿಂದ ಕೌಶಲ್ಯ ಆಧಆರಿತ ಶಿಕ್ಷಣ ಆರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ೧-೧೦ನೇ ತರಗತಿ, ಪಿಯು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದಲ್ಲಿ ವ್ಯಾಸಂಗಕ್ಕೆ ಶೇ.೭ರಷ್ಟು ಮೀಸಲಾತಿ ನೀಡಲಾಗಿದೆ ಎಂದರು.


ನಮ್ಮ ಮಕ್ಕಳು ಏಷ್ಯನ್ ಗೇಮ್ಸ್‌ನಲ್ಲಿ ೮ ಪದಕ ಗೆದ್ದಿದ್ದಾರೆ. ನಮ್ಮ ಸರ್ಕಾರ ಚಿನ್ನದ ಪದಕ ವಿಜೇತರಿಗೆ ೧ ಕೋಟಿ, ಬೆಳ್ಳಿ ಗೆದ್ದವರಿಗೆ ೭೫ ಲಕ್ಷ, ಕಂಚು ಗೆದ್ದವರಿಗೆ ೫೦ ಲಕ್ಷ ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡಿದೆ.ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ೨೦ ಕ್ರೀಡಾಪಟುಗಳಿಗೆ ತಲಾ ೫ ಲಕ್ಷ ನೀಡಲಾಗಿದೆ. ಪ್ಯಾರಾಲಿಂಪಿಕ್ಸ್ ಗೆ ತಯಾರಾಗುತ್ತಿರುವ ಕ್ರೀಡಾಪಟುಗಳ ಸಿದ್ಧತೆಗೆ ತಲಾ ೧೦ ಲಕ್ಷ ನೀಡಲಾಗುತ್ತಿದೆ ಎಂದರು.

ಕರ್ನಾಟಕ ಪ್ರಾದೇಶಿಕ ಯೋಜನೆ ರೂಪಿಸಿ ೨೦೪೭ರ ವೇಳೆಗೆ ರಾಜ್ಯಕ್ಕೆ ಹೊಸ ರೂಪ ನೀಡಲು ಹೆಜ್ಜೆ ಹಾಕುತ್ತಿದ್ದೇವೆ. ಇದರಿಂದ ಮುಂದಿನ ೨೦ ವರ್ಷಗಳಲ್ಲಿ ೫ ಲಕ್ಷ ಕೋಟಿ ಹೂಡಿಕೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಈಗಾಗಲೇ ೭೨ ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಆದೇಶ ಮಾಡಲಾಗಿದ್ದು, ೬೬ ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ರಸ್ತೆ ಸಂಪರ್ಕ ಯೋಜನೆಗೆ ೧೦ ಸಾವಿರ ಕೋಟಿ ನೀಡಿದ್ದು, ೨೦ ಸಾವಿರ ಕಿ.ಮೀ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ರಸ್ತೆಗಳ ಅಭಿವೃದ್ಧಿಗೆ ಪ್ರತಿ ಪಂಚಾಯ್ತಿಗೆ ೬ ಸಾವಿರ ಕೋಟಿ ಹಣ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ೧೦೦ ಹೊಸ ಆಂಬುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಲಾಗುವುದು.ಎಲ್ಲರ ಆಸ್ತಿ ದಾಖಲೆಗಳ ಮೂಲಕ ಮಾಲೀಕತ್ವ ಗಟ್ಟಿಗೊಳಿಸಲು ಭೂಗ್ಯಾರಂಟಿ ಜಾರಿಗೆ ತಂದಿದೆ. ರೈತರಿಗಾಗಿ ತೇಗದ ಸಿರಿ ಯೋಜನೆ ರೂಪಿಸಿದೆ.ರಾಜ್ಯದಲ್ಲಿ ೫ ಲಕ್ಷ ನಿವೇಶನಗಳನ್ನು ವಿತರಣೆ ಮಾಡಲು ಕಾರ್ಯಕ್ರಮ ನೀಡಲಾಗಿದೆ ಎಂದು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಲಕ್ಷಾಂತರ ಜನರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷಾಂತರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಹೆಸರನ್ನು ಮತ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಿಎಂ ಹೇಳಿದರು