
ಕಲಬುರಗಿ,ನ.1: ಕಲಬುರಗಿ ನಗರವನ್ನು ಕೇವಲ ಸ್ಮಾರ್ಟ್ ನಗರವನ್ನಾಗಿ ಮಾಡುವುದಷ್ಟೇ ಅಲ್ಲದೆ, ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿ ಹೊಂದಿದ ನಗರವನ್ನಾಗಿ ರೂಪಿಸುವ ಸಂಕಲ್ಪ ನಮ್ಮದಾಗಿದ್ದು, ಇದಕ್ಕಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ರವಿವಾರ ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದೇಶಿ ಬಂಡವಾಳ ಆಕರ್ಷಣೆ, ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ ನವ ಕರ್ನಾಟಕ ನಿರ್ಮಾಣಕ್ಕೆ ನವ ಕಲಬುರಗಿ ನಿರ್ಮಾಣ ಮಾಡಲಾಗುವುದು ಎಂದರು.
ಕಳೆದ ವರ್ಷ ಇದೇ ವೇದಿಕೆಯಲ್ಲಿಯೆ ನೀಲಿ ಮತ್ತು ಹಸಿರು ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿದ್ದೆ. ಅದರಂತೆ ನೀಲಿ ನಕ್ಷೆ ಇದೀಗ ಸಿದ್ದಪಡಿಸಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನವೀಕರಣಗೊಂಡ ಅಪ್ಪ ಕೆರೆ ಲೋಕಾರ್ಪಣೆಗೊಳಿಸಿದ್ದಾರೆ. ನಗರದ ಸೌಂದರ್ಯ ಹೆಚ್ಚಿಸಲು ಗಮನ ಹರಿಸಿದ್ದೇವೆ ಎಂದ ಅವರು, ಮುಂದಿನ ಒಂದೆರಡು ವರ್ಷದಲ್ಲಿ ನಮ್ಮ ಯೋಜನೆಗಳು ಕಾರ್ಯಗತಕ್ಕೆ ಬರಲಿವೆ ಎಂದರು.
ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನೆರವಾಗುವ ನಿಟ್ಟಿನಲ್ಲಿ ಈಗಾಗಲೇ ‘ಪ್ರಬುದ್ಧ ಅಕಾಡೆಮಿ’ ಸ್ಥಾಪಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (PPP) ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ‘ಕಲಬುರಗಿ ನೆಕ್ಸ್ಟ್ ಫೌಂಡೇಶನ್’ ರೂಪಿಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಇಂತಹ ಸಂಸ್ಥೆ ಬೇರೆಲ್ಲಿಯೂ ಕಾಣಲು ಸಿಗದು. ಅಭಿವೃದ್ಧಿ ಪಯಣದಲ್ಲಿ ಸರ್ಕಾರದೊಂದಿಗೆ ಎಲ್ಲಾ ಜನಪ್ರತಿನಿಧಿಗಳು, ಪತ್ರಕರ್ತರು, ಸಾರ್ವಜನಿಕರು ಸಾತ್ ನೀಡಬೇಕಾಗುತ್ತದೆ ಎಂದರು.
ತಲಾ ಅದಾಯ ಹೆಚ್ಚಳ ಗುರಿ:
ರಾಜ್ಯದ ಒಟ್ಟು ಜಿಡಿಪಿಗೆ ಬೆಂಗಳೂರು ನಗರ ಜಿಲ್ಲೆ ಶೇ. 40ರಷ್ಟು ಕೊಡುಗೆ ನೀಡುತ್ತಿದ್ದರೆ, ಕಲಬುರಗಿ ಜಿಲ್ಲೆಯ ಕೊಡುಗೆ ಪ್ರಸ್ತುತ ಶೇ. 1.9ರಷ್ಟಿದೆ. ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಕಲ್ಯಾಣ ಕರ್ನಾಟಕದ ಆರ್ಥಿಕ ಚೈತನ್ಯ ಹೆಚ್ಚಿಸಲು ಕಳೆದ ಸೆಪ್ಟೆಂಬರ್ 17ರಂದು ‘ಕಲ್ಯಾಣ ಕರ್ನಾಟಕ ಎಕನಾಮಿಕ್ ಮಿಷನ್’ ಘೋಷಿಸಿದ್ದಾರೆ. ಶೀಘ್ರದಲ್ಲಿಯೇ ಲೀಪ್ ಯೋಜನೆಯಡಿ ಎಲೆಕ್ಟ್ರಾನಿಕ್ಸ್ ಮತ್ತು ಟೆಕ್ಸ್ ಟೈಲ್ ಉದ್ಯಮಕ್ಕೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರ ಆರಂಭಿಸಲಾಗುವುದು. ಒಟ್ಟಾರೆಯಾಗಿ ಇಲ್ಲಿನ ಜನರ ಜೀವನಮಟ್ಟ ಸುಧಾರಣೆಯಾಗಿ ತಲಾ ಆದಾಯ ಹೆಚ್ಚಿಸುವುದೆ ನಮ್ಮ ಗುರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ತಿಳಿಸಿದರು.
ಇದಲ್ಲದೆ ಕಲ್ಯಾಣ ಕರ್ನಾಟಕ ಬಯೋ ಎಕನಾಮಿಕ್ ಮಿಷನ್ ಮೂಲಕ ರೈತರ ತಲಾ ಆದಾಯ ವೃದ್ಧಿಗೆ ಹೊಸ ಬಾಗಿಲುಗಳನ್ನು ತೆರೆಯಲಾಗುತ್ತಿದೆ. ತಂತ್ರಜ್ಞಾನವನ್ನು ಕೃಷಿ ಕ್ಷೇತ್ರಕ್ಕೆ ಜೋಡಿಸಿ, ಸ್ಥಳೀಯ ಪ್ರಸಿದ್ಧ ಉತ್ಪನ್ನಗಳಾದ ‘ಕಲಬುರಗಿ ತೊಗರಿ’ ಮತ್ತು ‘ಕಮಲಾಪುರ ಬಾಳೆಹಣ್ಣಿ’ಗೆ ಜಾಗತಿಕ ಮಟ್ಟದ ಮಾರುಕಟ್ಟೆ ಕಲ್ಪಿಸಲಾಗುವುದು ಎಂದರು.
2000 ವರ್ಷಗಳ ವೈಭವದ ಸಾಹಿತ್ಯ ಪರಂಪರೆ
ಇತ್ತೀಚೆಗೆ ದಸರಾ ಮಹೋತ್ಸವಕ್ಕೆ ಆಗಮಿಸಿದ್ದ 40ಕ್ಕೂ ಹೆಚ್ಚು ವಿದೇಶಿ ರಾಯಭಾರಿಗಳೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತ್ತು. ಕನ್ನಡ ಭಾಷೆಗೆ 2,000 ವರ್ಷಗಳ ಸುದೀರ್ಘ ಇತಿಹಾಸವಿದೆ ಎಂಬುದನ್ನು ತಿಳಿದು ವಿದೇಶಿ ಪ್ರತಿನಿಧಿಗಳು ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದರು. ಕನ್ನಡ ಕೇವಲ ಭಾಷೆಯಲ್ಲ, ಅದು ಭಾವನೆ, ಇತಿಹಾಸ ಮತ್ತು ವಿಚಾರ-ಆಚಾರಗಳ ಸಂಗಮವಾಗಿದೆ. ಜನಪದ, ದಾಸ, ಜೈನ, ನವೋದಯ, ನವ್ಯ ಹಾಗೂ ಬಂಡಾಯ ಸಾಹಿತ್ಯದಂತಹ ವೈವಿಧ್ಯಮಯ ಪರಂಪರೆ ಬೇರಾವ ಭಾಷೆಯಲ್ಲೂ ಕಾಣಸಿಗುವುದಿಲ್ಲ ಎಂದರು.
ಕರ್ನಾಟಕದ ವೈವಿಧ್ಯತೆಯನ್ನು ಬಣ್ಣಿಸಿದ ಅವರು, “ಮಲೆನಾಡು ಹಸಿರಿನ ಸಿರಿಯಾದರೆ, ಕಲ್ಯಾಣ ಕರ್ನಾಟಕ ತೊಗರಿಯ ಕಣಜ ಹಾಗೂ ಸೂಫಿ ಸಂತರ ನಾಡು. ಮಂಡ್ಯ ಭಾಗ ರೇಷ್ಮೆ-ಹಾಲಿನ ನಾಡಾದರೆ, ಕರಾವಳಿ ವಿಭಿನ್ನ ಸಂಸ್ಕೃತಿಯ ನೆಲೆ. ಬಸವಣ್ಣನವರ ಸಮಾನತೆಯ ತತ್ವ ಸಾರಿದ ಈ ನೆಲ ಜಾಗತಿಕ ಮಟ್ಟದಲ್ಲಿ ಜ್ಞಾನದ ನಾಡಾಗಿ ಗುರುತಿಸಿಕೊಂಡಿದೆ” ಎಂದು ಬಣ್ಣಿಸಿದ ಅವರು, ಕನ್ನಡದಲ್ಲಿನ ವೈವೈವಿಧ್ಯತೆ ಯಾವ ಭಾಷೆಯಲ್ಲಿಯೂ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಶಶೀಲ್ ಜಿ. ನಮೋಶಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್, ಐ.ಜಿ.ಪಿ ಶಾಂತನು ಸಿನ್ಹಾ, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಶಾಲು,
ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ.ಸುಶೀಲಾ, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ.ಶ್ರವಣಕುಮಾರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ರಿತಿಕಾ ವರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ಸುಜಾತಾ ಪಾಟೀಲ ಮತ್ತು ಉಪನ್ಯಾಸಕ ಮಾರುತಿ ಬೇಂದ್ರೆ ನಿರೂಪಿಸಿದರು.
ಮೆರವಣಿಗೆ ಚಾಲನೆ:
ನಂತರ ನಗರೇಶ್ವರ ಶಾಲೆಯಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರ ವರೆಗೆ ಸಾಗಿದ ನಾಡ ದೇವತೆ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.























