
ಕಲಬುರಗಿ ಸೆ 26: ನಗರದ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ ಪ್ರದೇಶವೊಂದರ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ್ದರಿಂದ ನಗರದ ವಸೀಮಶೇಖ್ ಎಂಬ ಅಪರಾಧಿಗೆ ಜಿಲ್ಲಾ ಮತ್ತು ಸತ್ರ ( ವಿಶೇಷ ಪೋಕ್ಸೋ ) ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ಮತ್ತು 35 ಸಾವಿರ ರೂ ದಂಡ ವಿಧಿಸಿದೆ.
ವಸೀಮಶೇಖ್ ಎಂಬಾತನು ಅಪ್ರಾಪ್ತೆಯನ್ನು ನಂಬಿಸಿ ಪ್ರೀತಿಸುವ ನಾಟಕವಾಡಿ,ಲೈಂಗಿಕ ದೌರ್ಜನ್ಯ ಎಸಗಿದ್ದು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ( ವಿಶೇಷ ಪೋಕ್ಸೋ ) ನ್ಯಾಯಾಲಯ- ಎಫ್‍ಟಿಎಸ್‍ಸಿ- 1 ನ್ಯಾಯಾಧೀಶರಾದ ಎಸ್.ಎಲ್ ಚವ್ಹಾಣ ಅವರು ಉಭಯ ಪಕ್ಷಗಳ ವಾದವನ್ನು ಆಲಿಸಿದ ನಂತರ, ಶಿಕ್ಷೆ ಮತ್ತು ದಂಡ ವಿಧಿಸಿ ಸೆ.24 ರಂದು ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ .ಬಿ ತುಪ್ಪದ ಅವರು ವಾದ ಮಂಡಿಸಿದ್ದರು.























