
ಬಾದಾಮಿ,ಆ.೨೪: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ಅ.೨೬ ರಿಂದ ಸ.೬ ರ ವರೆಗೆ ಪ್ರವಾದಿ ಮುಹಮ್ಮದ್(ಸ)ಅವರ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ ನಡೆಯಲಿದೆ ಎಂದು ಅಭಿಯಾನದ ಸಂಚಾಲಕ ಸಿರಾಜ ಅಹ್ಮದ ಪೀರ್ಜಾದೆ ಮತ್ತು ಸಹ ಸಂಚಾಲಕ ಮೈನುದ್ದೀನ ಕಂಪ್ಲಿ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಭಿಯಾನದ ಶೀರ್ಷಿಕೆ ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)’ ಎಂಬುದಾಗಿದೆ ಎಂದರು.
ಅಭಿಯಾನದ ಪ್ರಯುಕ್ತ, ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ಅವರು ಬರೆದ ‘ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್(ಸ)’ ಹಾಗೂ ವಾರ್ತಾ ಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರು ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)’ ಎಂಬ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ವೈಯಕ್ತಿಕ ಭೇಟಿ, ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ಎಂಬ ಶೀರ್ಷಿಕೆಯಡಿ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ, ಸೀರತ್ ಎಕ್ಸಿಬಿಶನ್, ಸಮಾಜಸೇವಾ ಚಟುವಟಿಕೆಗಳು, ಸೌಹಾರ್ದ ಸಂದೇಶ ಯಾಲಿಗಳು ಹೀಗೆ ವೈವಿದ್ಧಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯವಾಗಿ ಪುಸ್ತಕ ಬಿಡುಗಡೆ, ರಕ್ತದಾನ ಶಿಬಿರ, ಕ್ವಿಜ್ ಕಾರ್ಯಕ್ರಮ, ವಿಚಾರಗೋಷ್ಠಿ, ವೃದ್ದಾಶ್ರಮ ಭೇಟಿ, ಆಸ್ಪತ್ರೆ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಕೀರ ಮುಲ್ಲಾ, ಫೈರೋಜ ಗೊಲಂದಜ, ಮಹಮ್ಮದ ಇಲ್ಯಾಸ ಉಪಸ್ಥಿತರಿದ್ದರು.
































