Home ಮುಖಪುಟ ಸುದ್ದಿ ನಾಳೆ ಮಾತನಾಡುತ್ತೇನೆ:ಸಿಎಂ

ನಾಳೆ ಮಾತನಾಡುತ್ತೇನೆ:ಸಿಎಂ

ಬೆಂಗಳೂರು, ಮೇ ೨೭- ದೆಹಲಿಯಲ್ಲಿ ನಿನ್ನೆ ಹೈಕಮಾಂಡ್ ಜತೆಗಿನ ಸಭೆ, ಚರ್ಚೆ ಬಗ್ಗೆ ನಾಳೆ ಮಾತನಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ದೇಶದ ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರುರವರ ಪುಣ್ಯತಿಥಿಯ ದಿನವಾದ ಇಂದು ವಿಧಾನಸೌಧದ ಮುಂಭಾಗದಲ್ಲಿರುವ ನೆಹರುರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರು ದೆಹಲಿ ಬೆಳವಣಿಗೆ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಬೇಡ, ನಾಳೆ ಮಾತನಾಡುತ್ತೇನೆ ಎಂದಷ್ಟೇ ಉತ್ತರಿಸಿದರು.


ನಿನ್ನೆ ದೆಹಲಿಯಲ್ಲಿ ಹೈಕಮಾಂಡ್ ಭೇಟಿ, ಚರ್ಚೆ, ನಾಯಕತ್ವ ಬದಲಾವಣೆ ಯಾವುದರ ಬಗ್ಗೆಯೂ ಮಾತನಾಡದೆ ಮೌನ ವಹಿಸಿದ ಸಿದ್ದರಾಮಯ್ಯನವರು, ನಾಳೆ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಹೇಳಿ, ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲು ಬಯಸಲಿಲ್ಲ.


ನೆಹರು ಗುಣಗಾನ


ಇದಕ್ಕೂ ಮೊದಲು ನೆಹರುರವರಿಗೆ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ನೆಹರುರವರು ಸ್ವತಂತ್ರ ಬಂದ ನಂತರ ದೇಶದ ಮೊದಲ ಪ್ರಧಾನಿಯಾಗಿ ೧೪ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಆಧುನಿಕ ಭಾರತ ನಿರ್ಮಾಣದಲ್ಲಿ ನೆಹರುರವರ ಪಾತ್ರ ದೊಡ್ಡದಿದೆ ಎಂದರು.


ದೇಶದಲ್ಲಿ ದೊಡ್ಡ ದೊಡ್ಡ ಜಲಾಶಯ, ಕೈಗಾರಿಕೆ ನಿರ್ಮಾಣದಲ್ಲಿ ನೆಹರುರವರ ಕೊಡುಗೆ ದೊಡ್ಡದು. ನೆಹರುರವರು ಪಂಚವಾರ್ಷಿಕ ಯೋಜನೆ ಜಾರಿ ಮಾಡಿದ ದೇಶವನ್ನು ಪ್ರಗತಿಯತ್ತ ಮುನ್ನಡೆಸಿದ್ದರು ಎಂದು ಸ್ಮರಿಸಿದರು.


ಈ ಸಂದರ್ಭದಲ್ಲಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಜಮೀರ್ ಅಹಮದ್ ಖಾನ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.