Home ಜಿಲ್ಲೆ ಸದಾಚಾರವೇ ಪರಮಶಾಂತಿಯ ಮಾರ್ಗ: ಸಂಗಮೇಶ್ವರ ಶ್ರೀ

ಸದಾಚಾರವೇ ಪರಮಶಾಂತಿಯ ಮಾರ್ಗ: ಸಂಗಮೇಶ್ವರ ಶ್ರೀ

ವಿಜಯಪುರ, ಜು. 4: ಮನುಷ್ಯನ ಜೀವನದಲ್ಲಿ ಪರಮಶಾಂತಿ, ಸುಖ ಮತ್ತು ನೆಮ್ಮದಿ ನೆಲೆಸಬೇಕಾದರೆ ಸದಾಚಾರವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಸಾಲೋಟಗಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಶ್ರಮದ ಪೂಜ್ಯ ಸಂಗಮೇಶ್ವರ ಶ್ರೀಗಳು ಹೇಳಿದರು.
ಬೊಳೆಗಾಂವದ ನೂತನ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಸತ್ಸಂಗದಲ್ಲಿ ಅವರು ಮಾತನಾಡಿ, “ಸದಾಚಾರ ಎಂದರೆ ಪರಿಶುದ್ಧವಾದ ಬದುಕು. ಆಚಾರವೆಂದರೆ ಕ್ರಿಯೆ. ಭಕ್ತಿಯ ಮಾರ್ಗದಲ್ಲಿ ಸಾಗುವ ಸದ್ಭಕ್ತನು ತನ್ನ ತನು, ಮನ ಮತ್ತು ಭಾವವನ್ನು ಪವಿತ್ರಗೊಳಿಸಿಕೊಂಡು ಸದಾಕಾಲ ಭಗವಂತನ ಸ್ಮರಣೆಯಲ್ಲಿ ಬದುಕುವುದೇ ನಿಜವಾದ ಸದಾಚಾರ” ಎಂದು ತಿಳಿಸಿದರು.
ಸದಾಚಾರದಿಂದಲೇ ಬದುಕಿನಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ. ಸದಾಚಾರವಿಲ್ಲದ ಜೀವನ ದುಃಖ, ಅಶಾಂತಿ ಹಾಗೂ ಸಂಕಷ್ಟಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.
ಮನುಷ್ಯನು ಈ ಜಗತ್ತಿಗೆ ಬಂದಿರುವುದು ಪರಮಶಾಂತಿಯನ್ನು ಅನುಭವಿಸುವುದಕ್ಕಾಗಿ. ಅದನ್ನೇ ಜೀವನದ ಧ್ಯೇಯ ಮತ್ತು ಉದ್ದೇಶವನ್ನಾಗಿಸಿಕೊಳ್ಳಬೇಕು. ಕ್ಷಣಿಕ ಸುಖ ನೀಡುವ ಹಣ, ಆಸ್ತಿ, ಮನೆ, ಹೊಲ, ವಸ್ತು ಹಾಗೂ ಬಂಗಾರ ಗಳಿಕೆಯಲ್ಲಿ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಬಾಹ್ಯ ಸಿರಿ-ಸಂಪತ್ತು ಬಂಧನ ಮತ್ತು ದುಃಖಕ್ಕೆ ಕಾರಣವಾಗಬಹುದು. ಆದರೆ ಸದಾಚಾರ, ಸದ್ಗುಣ ಮತ್ತು ಭಗವಂತನ ಸ್ಮರಣೆ ಪರಮಶಾಂತಿಗೆ ದಾರಿ ಮಾಡಿಕೊಡುತ್ತವೆ. ಇದೇ ಕಾರಣಕ್ಕೆ ಸಂತರು ಮತ್ತು ಶರಣರು ಸದಾಚಾರಕ್ಕೆ ಅತ್ಯಂತ ಮಹತ್ವ ನೀಡಿದ್ದಾರೆ ಎಂದು ಹೇಳಿದರು.
ಅನಾಚಾರದ ಬದುಕು ಅಶಾಂತಿಯನ್ನು ಉಂಟುಮಾಡಿದರೆ, ಸದಾಚಾರದ ಬದುಕು ಪರಮಶಾಂತಿಯನ್ನು ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸದಾಚಾರದ ಮಾರ್ಗದಲ್ಲಿ ನಡೆದು ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಸಂಗಮೇಶ್ವರ ಶ್ರೀಗಳು ಕರೆ ನೀಡಿದರು.