
ಬೆಂಗಳೂರು, ಸೆ.೧೬- ದಿನನಿತ್ಯದ ಅಡುಗೆಗೆ ಅಗತ್ಯವಾಗಿರುವ ಅಕ್ಕಿಯ ಬೆಲೆ ಮತ್ತೆ ಗಗನಕ್ಕೇರುತ್ತಿದ್ದು, ಶ್ರೀಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ. ಕಳೆದೊಂದು ವಾರದಿಂದ ವಿವಿಧ ಬಗೆಯ ಅಕ್ಕಿಯ ದರದಲ್ಲಿ ಏರಿಕೆಯಾಗುತ್ತಿದ್ದು, ಇದೀಗ ಕೋಲಂ ರೈಸ್ ಕೆಜಿಗೆ ೧೦೦ಕ್ಕೆ ತಲುಪಿದೆ.
ಕೆಲವೇ ದಿನಗಳ ಹಿಂದೆ ಕೆಜಿಗೆ ೭೫ರಷ್ಟಿದ್ದ ಕೋಲಂ ರೈಸ್ (ಬುಲೆಟ್) ದರ ಇದೀಗ ಏಕಾಏಕಿ ೧೦೦ಕ್ಕೆ ಏರಿಕೆಯಾಗಿದೆ. ಅಂದರೆ ಕೆಜಿಗೆ ೨೫ರಷ್ಟು ಹೆಚ್ಚಳವಾಗಿದೆ. ಅಕ್ಕಿಯ ಬೆಲೆ ಮತ್ತೊಮ್ಮೆ ಶತಕದ ಗಡಿ ದಾಟಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಕೋಲಂ ಅಕ್ಕಿಯಷ್ಟೇ ಅಲ್ಲದೆ ಸೋನಾಮಸೂರಿ, ಸ್ಟೀಮ್ ಅಕ್ಕಿ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಅಕ್ಕಿ ತಳಿಗಳ ದರದಲ್ಲೂ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಜೀರಾ ಸಾಂಬ ಅಕ್ಕಿಯ ದರ ನಾಲ್ಕೇ ದಿನಗಳಲ್ಲಿ ಕೆಜಿಗೆ ೧೮೦ರಿಂದ ೨೦೦ಕ್ಕೆ ಏರಿಕೆಯಾಗಿದೆ.
ಅಕ್ಕಿ ದರ ಏರಿಕೆಗೆ ಸೂಕ್ತ ಪ್ರಮಾಣದಲ್ಲಿ ಇಳುವರಿ ಲಭ್ಯವಾಗದಿರುವುದೇ ಪ್ರಮುಖ ಕಾರಣ ಎಂದು ವರ್ತಕರು ಹೇಳುತ್ತಿದ್ದಾರೆ. ಮಾರುಕಟ್ಟೆಗೆ ಬರುತ್ತಿರುವ ಅಕ್ಕಿಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ದರದಲ್ಲಿ ಏರಿಕೆಯಾಗಿದೆ ಎಂಬುದು ವ್ಯಾಪಾರಿಗಳ ವಾದ.
ವಿವಿಧ ಅಕ್ಕಿಗಳ ಹೊಸ ದರ:-
ಅಕ್ಕಿ ತಳಿ
ಹೊಸ ದರ
ಸಾಮಾನ್ಯ ದರ
ಕೋಲಂ ಅಕ್ಕಿ (ಬುಲೆಟ್)
೧೦೦/ಕೆಜಿ
೭೫/ಕೆಜಿ
ಸೋನಾಮಸೂರಿ
೮೨/ಕೆಜಿ
೬೮/ಕೆಜಿ
ಜೀರಾ ಸಾಂಬ
೨೦೦/ಕೆಜಿ
೧೮೦/ಕೆಜಿ
ಸ್ಟೀಮ್ ಅಕ್ಕಿ
೭೫/ಕೆಜಿ
೬೮/ಕೆಜಿ
ಅಕ್ಕಿಯ ದರ ಏರಿಕೆಯಿಂದ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಒತ್ತಡದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಹೊರೆ ಬೀಳುವಂತಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಲಿದೆಯೇ ಅಥವಾ ಮಾರುಕಟ್ಟೆಗೆ ಹೊಸ ಸರಕು ಬಂದ ಬಳಿಕ ದರ ಇಳಿಕೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
































