Home ಮುಖಪುಟ ಸುದ್ದಿ ನಾಡಿದ್ದು ರಾಜ್ಯಕ್ಕೆ ಅಮಿತ್ ಶಾ ಭೇಟಿ

ನಾಡಿದ್ದು ರಾಜ್ಯಕ್ಕೆ ಅಮಿತ್ ಶಾ ಭೇಟಿ

ಬೆಂಗಳೂರು, ಸೆ. ೧೬- ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದು, ಇದೇ ತಿಂಗಳ ೧೮ ಮತ್ತು ೧೯ ರಂದು ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.


ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತರ ಮೇಲೆ ಇಡಿ ದಾಳಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಗಿರುವಾಗಲೇ ಕೇಂದ್ರ ಸಚಿವರ ರಾಜ್ಯ ಭೇಟಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.


ಕೇಂದ್ರ ಸಚಿವ ಅಮಿತ್ ಶಾ ಅವರು ಎರಡು ದಿನಗಳ ರಾಜ್ಯ ಭೇಟಿ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೂ ಭೇಟಿ ನೀಡುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕಾರಣ ತನ್ನದೇ ಆದ ಮಹತ್ವ ಹೊಂದಿದೆ. ಹಾಗಾಗಿ ಅಮಿತ್ ಶಾ ರವರ ಬೆಳಗಾವಿ ಭೇಟಿ ಸಹ ಕುತೂಹಲ ಮೂಡಿಸಿದೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಅವರು ಬೆಳಗಾವಿಯಲ್ಲಿ ಪಕ್ಷ ಸಂಘಟನೆ ಮತ್ತಿತರ ವಿಚಾರಗಳ ಬಗ್ಗೆಯೂ ಬಿಜೆಪಿ ಮುಖಂಡರ ಜತೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.


ಈ ತಿಂಗಳ ೧೮ ರಂದು ರಾತ್ರಿ ದೆಹಲಿಯಿಂದ ನೇರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಮಿತ್ ಶಾ ಅವರು, ಅಂದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಮರು ದಿನಗಳ ಬೆಳಗ್ಗೆ ಅಂದರೆ ಸೆ. ೧೯ ರಂದು ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಕೆಎಲ್‌ಇ ಸಂಸ್ಥೆ ನೂತನವಾಗಿ ನಿರ್ಮಿಸಲಿರುವ ೧೫೦೦ ಹಾಸಿಗೆಗಳ ಹೈಟೆಕ್ ಆಸ್ಪತ್ರೆ ಮತ್ತು ನೂತನ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡವನ್ನು ಲೋಕಾರ್ಪಣೆ ಮಾಡುವರು


ಈ ಕಾರ್ಯಕ್ರಮದ ನಂತರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಕ್ಸಾಂಬಾ ಗ್ರಾಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಒಡೆತನದ ಬೀರೇಶ್ವರ ಕೋ- ಆಪರೇಟಿವ್ ಕ್ರೇಡಿಟ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟಿಸುವರು.


ಈ ಸಂದರ್ಭದಲ್ಲಿ ಅಮಿತ್ ಶಾ ಅವರು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.