Home ಮುಖಪುಟ ಸುದ್ದಿ ‘ಮಿಷನ್ ನಿಖರ’ ಅಭಿಯಾನ: ಪೆಟ್ರೋಲ್ ಬಂಕ್‌ಗಳ ತಪಾಸಣೆಗೆ ನಿರ್ಧಾರ

‘ಮಿಷನ್ ನಿಖರ’ ಅಭಿಯಾನ: ಪೆಟ್ರೋಲ್ ಬಂಕ್‌ಗಳ ತಪಾಸಣೆಗೆ ನಿರ್ಧಾರ

ಬೆಂಗಳೂರು, ಸೆ.೧೬:ಗ್ರಾಹಕರು ಪಾವತಿಸುವ ಹಣಕ್ಕೆ ನಿಖರ ಪ್ರಮಾಣದ ಪೆಟ್ರೋಲ್ ಹಾಗೂ ಡೀಸೆಲ್ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ‘ಮಿಷನ್ ನಿಖರ’ ಎಂಬ ವಿಶೇಷ ಅಭಿಯಾನ ಆರಂಭಿಸಲು ಮುಂದಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ವಿಕಾಸದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪೆಟ್ರೋಲಿಯಂ ಕಂಪನಿಗಳ ಬಂಕ್‌ಗಳ ಮೂಲಕ ನಡೆಯುತ್ತಿರುವ ತೈಲ ಪೂರೈಕೆ ವ್ಯವಸ್ಥೆಯಲ್ಲಿ ಕಂಡುಬಂದಿರುವ ಲೋಪಗಳನ್ನು ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪರಿಶೀಲನೆಯಲ್ಲಿ ಹಲವು ಪೆಟ್ರೋಲ್ ಬಂಕ್‌ಗಳಲ್ಲಿನ ಇಂಧನ ಅಳತೆ ವ್ಯವಸ್ಥೆಯಲ್ಲಿ ವ್ಯತ್ಯಾಸ ಕಂಡುಬಂದಿದೆ .ರಾಜ್ಯದಲ್ಲಿ ಪರಿಶೀಲಿಸಲಾದ ೮೦೫ ಬಂಕ್‌ಗಳಲ್ಲಿ ಒಟ್ಟು ೩,೦೭೧ ಪೆಟ್ರೋಲ್ ಗನ್‌ಗಳಿದ್ದು, ಅವುಗಳ ಪೈಕಿ ೨,೬೧೮ ಗನ್‌ಗಳಲ್ಲಿ ಅಳತೆಯಲ್ಲಿ ಕಡಿತ ಕಂಡುಬಂದಿದೆ. ಸುಮಾರು ಶೇ.೮೫ರಷ್ಟು ಗನ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನ ಪೂರೈಕೆಯಾಗುತ್ತಿರುವುದು ಪರಿಶೀಲನೆಯಲ್ಲಿ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.

ಪರಿಶೀಲನೆ ವೇಳೆ ಕೆಲವು ಬಂಕ್‌ಗಳಲ್ಲಿ ೧೦ ಲೀಟರ್‌ಗೆ ೫೦ ಮಿ.ಲೀ., ೧೦೦ ಮಿ.ಲೀ. ಹಾಗೂ ೧೬೦ ಮಿ.ಲೀ.ಗೂ ಅಧಿಕ ಪ್ರಮಾಣದಲ್ಲಿ ಇಂಧನ ಕಡಿಮೆಯಾಗಿರುವುದು ಪತ್ತೆಯಾಗಿದೆ. ಮೂರು ಬಂಕ್‌ಗಳಲ್ಲಿ ೧೦ ಲೀಟರ್‌ಗೆ ೧೬೦ ಮಿ.ಲೀ.ಗೂ ಅಧಿಕ ವ್ಯತ್ಯಾಸ ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

“ಜನರು ಕೊಟ್ಟ ಹಣಕ್ಕೆ ತಕ್ಕ ಪೆಟ್ರೋಲ್ ನಿಖರವಾಗಿ ಸಿಗಬೇಕು. ಕಡಿಮೆಯೂ ಅಲ್ಲ, ಹೆಚ್ಚೂ ಅಲ್ಲ, ನಿಖರ ಪ್ರಮಾಣದ ಇಂಧನ ಸಿಗುವಂತೆ ಮಾಡುವ ಉದ್ದೇಶದಿಂದ ‘ಮಿಷನ್ ನಿಖರ’ ಅಭಿಯಾನ ಕೈಗೊಳ್ಳಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.ಬಂಕ್ ಮಾಲೀಕರು ಪ್ರತಿದಿನ ಪೆಟ್ರೋಲ್ ಗನ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು. ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪೆಟ್ರೋಲ್ ಬಂಕ್‌ಗಳ ಅಳತೆ ಸಾಧನಗಳ ಮರುಮಾಪನ (ರೀ-ಕ್ಯಾಲಿಬರೇಷನ್) ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೊಮ್ಮೆ ನಡೆಸುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

೨೦೨೫ರ ಡಿಸೆಂಬರ್ ೧೮ರಂದು ಹೊರಡಿಸಲಾದ ಅಧಿಸೂಚನೆಯಂತೆ ಎರಡು ವರ್ಷಕ್ಕೊಮ್ಮೆ ಕ್ಯಾಲಿಬರೇಷನ್ ಮಾಡುವ ಕ್ರಮವನ್ನು ಜಾರಿಗೆ ತರಲು ರಾಜ್ಯಗಳಿಗೆ ಸೂಚಿಸಲಾಗಿದೆ. “ಒಂದು ವರ್ಷಕ್ಕೊಮ್ಮೆ ಸರ್ವಿಸ್ ಮಾಡಲಾಗುತ್ತಿರುವ ಯಂತ್ರಗಳಲ್ಲೇ ಇಷ್ಟೊಂದು ವ್ಯತ್ಯಾಸ ಕಂಡುಬಂದಿದೆ. ಹೀಗಿರುವಾಗ ಎರಡು ವರ್ಷಕ್ಕೊಮ್ಮೆ ಕ್ಯಾಲಿಬರೇಷನ್ ಮಾಡುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ” ಎಂದು ಅವರು ಹೇಳಿದ್ದಾರೆ.

ಅದೇ ರೀತಿ, ೨೦೨೬ರ ಮೇ ೧೮ರಂದು ಹೊರಡಿಸಲಾದ ಮತ್ತೊಂದು ಅಧಿಸೂಚನೆಯಲ್ಲಿ ಪೆಟ್ರೋಲ್ ಬಂಕ್‌ಗಳ ತಪಾಸಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ನೀತಿಯನ್ನು ಜಾರಿಗೆ ತರಲಾಗಿದೆ. ಈ ತಪಾಸಣಾ ಕಾರ್ಯವನ್ನು ಸರ್ಕಾರಿ ಸಂಸ್ಥೆಗಳೇ ನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.

ಕೇಂದ್ರದ ಎರಡೂ ಅಧಿಸೂಚನೆಗಳ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲಿದೆ. ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಈ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುವುದು. ಸಂಪುಟ ಸಭೆಯಲ್ಲಿ ವಿಷಯ ಚರ್ಚಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತಂದು ಅಧಿಕೃತವಾಗಿ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಅಳತೆಯಲ್ಲಿ ವ್ಯತ್ಯಾಸದಿಂದ ಗ್ರಾಹಕರಿಗೆ ನಷ್ಟವಾಗುವುದರ ಜೊತೆಗೆ ರಾಜ್ಯ ಸರ್ಕಾರಕ್ಕೂ ತೆರಿಗೆ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಇಂಧನದ ಪ್ರಮಾಣ, ಗುಣಮಟ್ಟ ಸೇರಿದಂತೆ ಅಗತ್ಯ ಮಾಹಿತಿಯನ್ನು ಪ್ರದರ್ಶಿಸುವಂತೆ ಪೆಟ್ರೋಲಿಯಂ ಕಂಪನಿಗಳಿಗೆ ಸೂಚಿಸಲಾಗುವುದು. ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಸ್ಥಳ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸದ ಬಂಕ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ದೂರು ನೀಡಲು ಟೋಲ್‌ಫ್ರೀ ಸಂಖ್ಯೆ

ಪೆಟ್ರೋಲ್ ಅಥವಾ ಡೀಸೆಲ್‌ನ ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ಗ್ರಾಹಕರಿಗೆ ಅನುಮಾನವಿದ್ದರೆ ೧೮೦೦ ೫೯೯ ೧೧೦೦ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ದೂರುಗಳ ಆಧಾರದ ಮೇಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ.

ಗ್ರಾಹಕರು ಇಲಾಖೆಗೆ ಇ-ಮೇಲ್ ಮೂಲಕವೂ ದೂರು ಸಲ್ಲಿಸಬಹುದು. ಈ ದೂರು ವ್ಯವಸ್ಥೆ ಇಂದಿನಿಂದಲೇ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.