
ವಾಷಿಂಗ್ಟನ್, ಸೆ.೧೬- ರಷ್ಯಾದಿಂದ ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ ಖರೀದಿಸುವ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳಲು ಅಮೆರಿಕ ಮುಂದಾಗಿದೆ. ರಷ್ಯಾದ ಇಂಧನ ಖರೀದಿದಾರ ರಾಷ್ಟ್ರಗಳ ಮೇಲೆ ಗರಿಷ್ಠ ಶೇ. ೧೦೦ರವರೆಗೆ ಸುಂಕ ವಿಧಿಸುವ ಅಧಿಕಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡುವ ಮಸೂದೆ ಅಮೆರಿಕದ ಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್)ಯಲ್ಲಿ ಅಂತಿಮ ಮತದಾನದ ಹಂತ ತಲುಪಿದೆ. ಸೆ.೧೫ರಂದು ನಡೆದ ಪ್ರಕ್ರಿಯಾತ್ಮಕ ಮತದಾನದಲ್ಲಿ ಮಸೂದೆ ೨೧೪ -೨೧೧ ಮತಗಳಿಂದ ಮುಂದುವರಿದಿದ್ದು, ಸೆ.೧೬ರಂದು ಹೌಸ್ನಲ್ಲಿ ಅಂತಿಮ ಮತದಾನ ನಡೆಯುವ ನಿರೀಕ್ಷೆಯಿದೆ.
‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ ೨೦೨೬’ ಎಂದು ಕರೆಯಲಾಗಿರುವ ಈ ಮಸೂದೆಗೆ ಅಮೆರಿಕ ಸೆನೆಟ್ನಲ್ಲಿ ಈಗಾಗಲೇ ಭಾರಿ ಬಹುಮತ ದೊರೆತಿದೆ. ಆಗಸ್ಟ್ನಲ್ಲಿ ಸೆನೆಟ್ ೮೬೧೧ ಮತಗಳಿಂದ ಮಸೂದೆಯನ್ನು ಅಂಗೀಕರಿಸಿತ್ತು. ರಷ್ಯಾದ ಇಂಧನ ಆದಾಯದ ಮೇಲೆ ಒತ್ತಡ ಹೇರುವುದು, ನಿರ್ಬಂಧಗಳನ್ನು ತಪ್ಪಿಸುವ ಜಾಲದ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ರಷ್ಯಾ- ಇರಾನ್ ವಿರುದ್ಧದ ನಿರ್ಬಂಧಗಳನ್ನು ಮತ್ತಷ್ಟು ಬಲಪಡಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ.
ಭಾರತಕ್ಕೆ ಏಕೆ ಆತಂಕ
ಮಸೂದೆ ಹೌಸ್ನಲ್ಲಿ ಚರ್ಚೆಗೆ ಬಂದ ಬಳಿಕ ಭಾರತ ಈ ಬೆಳವಣಿಗೆಯ ಕೇಂದ್ರಬಿಂದುವಾಗಿದೆ. ಡೆಮಾಕ್ರಟಿಕ್ ಪ್ರತಿನಿಧಿ ಸ್ಟೆನಿ ಹೋಯರ್ ಮಂಡಿಸಿದ ತಿದ್ದುಪಡಿಯೊಂದರಲ್ಲಿ ರಷ್ಯಾದ ಮೂಲದ ಕಚ್ಚಾ ತೈಲ ಅಥವಾ ನೈಸರ್ಗಿಕ ಅನಿಲ ಖರೀದಿಸುವ ಅಥವಾ ರಷ್ಯಾ ವಿರುದ್ಧದ ನಿರ್ಬಂಧಗಳನ್ನು ತಪ್ಪಿಸಲು ನೆರವಾಗುವ ದೇಶಗಳ ಪಟ್ಟಿಯನ್ನು ನಿರ್ದಿಷ್ಟವಾಗಿ ನೀಡಲಾಗಿತ್ತು.
ಈ ಪಟ್ಟಿಯಲ್ಲಿ ಭಾರತ, ಚೀನಾ, ಟರ್ಕಿ, ಅಜರ್ಬೈಜಾನ್, ಹಂಗೇರಿ, ಸ್ಲೋವಾಕ್ ಗಣರಾಜ್ಯ, ಯುಎಇ, ಸಿಂಗಾಪುರ, ಕಜಕಸ್ತಾನ್ ಮತ್ತು ಕಿರ್ಗಿಜ್ ಗಣರಾಜ್ಯ ಸೇರಿವೆ. ಈ ದೇಶಗಳನ್ನು ಶೇ.೧೦೦ರವರೆಗೆ ಸುಂಕ ವಿಧಿಸಲು ಅರ್ಹವಾಗಬಹುದಾದ ರಾಷ್ಟ್ರಗಳೆಂದು ಗುರುತಿಸುವ ಪ್ರಸ್ತಾವನೆ ಮಾಡಲಾಗಿತ್ತು.
ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಭಾರತದ ಮೇಲೆ ಶೇ.೧೦೦ ಸುಂಕವನ್ನು ಅಮೆರಿಕ ಈಗಾಗಲೇ ವಿಧಿಸಿಲ್ಲ. ಹೋಯರ್ ಅವರ ತಿದ್ದುಪಡಿಯನ್ನು ಹೌಸ್ ರೂಲ್ಸ್ ಸಮಿತಿ ೩-೭ ಮತಗಳಿಂದ ಸದನದಲ್ಲಿ ಪರಿಗಣನೆಗೆ ಅವಕಾಶ ನೀಡದೆ ತಿರಸ್ಕರಿಸಿದೆ. ಹೀಗಾಗಿ ಭಾರತವನ್ನು ಹೆಸರಿಸಿರುವ ಈ ನಿರ್ದಿಷ್ಟ ತಿದ್ದುಪಡಿ ಪ್ರಸ್ತುತ ಅಂಗೀಕೃತ ಕಾನೂನಿನ ಭಾಗವಾಗಿಲ್ಲ.
ಹಾಗಾದರೆ ಶೇ.೧೦೦ ಸುಂಕದ ಸಾಧ್ಯತೆ ಹೇಗೆ?
ಸೆನೆಟ್ ಅಂಗೀಕರಿಸಿರುವ ಮಸೂದೆಯಲ್ಲಿಯೇ ರಷ್ಯಾದ ಇಂಧನದ ಪ್ರಮುಖ ಖರೀದಿದಾರ ರಾಷ್ಟ್ರಗಳ ವಿರುದ್ಧ ಹೆಚ್ಚುವರಿ ಸುಂಕ ವಿಧಿಸಲು ಅಧ್ಯಕ್ಷರಿಗೆ ವ್ಯಾಪಕ ಅಧಿಕಾರ ನೀಡುವ ವ್ಯವಸ್ಥೆ ಇದೆ. ಅಂದರೆ, ಮಸೂದೆ ಕಾನೂನಾಗಿ ಜಾರಿಯಾದರೆ, ಅದರಲ್ಲಿರುವ ಷರತ್ತುಗಳಿಗೆ ಅನುಗುಣವಾಗಿ ಅಧ್ಯಕ್ಷರು ರಷ್ಯಾದ ತೈಲ ಅಥವಾ ಅನಿಲ ಖರೀದಿಸುವ ಕೆಲವು ದೇಶಗಳ ವಿರುದ್ಧ ಗರಿಷ್ಠ ಶೇ.೧೦೦ರವರೆಗೆ ಸುಂಕ ವಿಧಿಸುವ ಕ್ರಮ ಕೈಗೊಳ್ಳಲು ಸಾಧ್ಯವಾಗಬಹುದು.
ಹೀಗಾಗಿ ಈಗಿನ ಬೆಳವಣಿಗೆಯನ್ನು ‘ಭಾರತದ ಮೇಲೆ ಶೇ.೧೦೦ ಸುಂಕ ಜಾರಿ’ ಎಂದು ಪರಿಗಣಿಸುವಂತಿಲ್ಲ. ಬದಲಾಗಿ, ಅಂತಹ ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕ ಅಧ್ಯಕ್ಷರಿಗೆ ನೀಡುವ ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎನ್ನುವುದು ಹೆಚ್ಚು ನಿಖರವಾದ ವಿವರಣೆ.
ಸೆನೆಟ್ ಅಂಗೀಕರಿಸಿದ ಆವೃತ್ತಿ ಮತ್ತು ಹೌಸ್ನಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಯ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಸೆನೆಟ್ ಆವೃತ್ತಿಯಲ್ಲಿ ಭಾರತ ಅಥವಾ ಚೀನಾ ಸೇರಿದಂತೆ ನಿರ್ದಿಷ್ಟ ದೇಶಗಳ ಹೆಸರನ್ನು ನೇರವಾಗಿ ನಮೂದಿಸದೆ, ರಷ್ಯಾದ ಇಂಧನದ ಅತಿ ದೊಡ್ಡ ಐದು ಖರೀದಿದಾರ ರಾಷ್ಟ್ರಗಳ ಮೇಲೆ ಕ್ರಮ ಕೈಗೊಳ್ಳಬಹುದಾದ ವಿಶಾಲ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಹೌಸ್ನಲ್ಲಿ ಹೋಯರ್ ತಿದ್ದುಪಡಿಯ ಮೂಲಕ ದೇಶಗಳ ಹೆಸರುಗಳನ್ನು ನೇರವಾಗಿ ಸೇರಿಸುವ ಪ್ರಯತ್ನ ನಡೆಯಿತು. ಆದರೆ ಆ ತಿದ್ದುಪಡಿ ರೂಲ್ಸ್ ಸಮಿತಿಯ ಹಂತದಲ್ಲೇ ತಡೆಗಟ್ಟಲ್ಪಟ್ಟಿದೆ.ಮಸೂದೆಯಲ್ಲಿರುವ ವ್ಯಾಪಕ ಸುಂಕಾಧಿಕಾರಕ್ಕೆ ಹೌಸ್ನಲ್ಲೇ ವಿರೋಧವೂ ವ್ಯಕ್ತವಾಗಿದೆ. ಪ್ರತಿನಿಧಿ ಗ್ರೆಗೊರಿ ಮೀಕ್ಸ್ ಸೇರಿದಂತೆ ಕೆಲವು ಡೆಮಾಕ್ರಟಿಕ್ ಸದಸ್ಯರು ಅಧ್ಯಕ್ಷರಿಗೆ ನೀಡಲಾಗುವ ದ್ವಿತೀಯಕ ಸುಂಕ ವಿಧಿಸುವ ಅಧಿಕಾರವನ್ನು ತೆಗೆದುಹಾಕುವ ತಿದ್ದುಪಡಿ ಮಂಡಿಸಿದ್ದರು.
ಈ ತಿದ್ದುಪಡಿಗೂ ನಿಯಾಮಾವಳಿ ಸಮಿತಿಯಲ್ಲಿ ಅವಕಾಶ ದೊರೆಯಲಿಲ್ಲ. ಹೀಗಾಗಿ ಅಧ್ಯಕ್ಷರಿಗೆ ನೀಡಲಾಗುವ ಸುಂಕಾಧಿಕಾರವು ಮಸೂದೆಯ ಮುಂದಿನ ಹಂತದಲ್ಲೂ ಪ್ರಮುಖ ಚರ್ಚೆಯ ವಿಷಯವಾಗಿಯೇ ಉಳಿದಿದೆ.ಮಸೂದೆಯ ವ್ಯಾಪ್ತಿ ಕೇವಲ ತೈಲ ಖರೀದಿಗೆ ಸೀಮಿತವಾಗಿಲ್ಲ. ರಷ್ಯಾದ ರಾಜಕೀಯ ನಾಯಕತ್ವ, ಇಂಧನ ವಲಯ, ಹಣಕಾಸು ವ್ಯವಸ್ಥೆ ಮತ್ತು ನಿರ್ಬಂಧಗಳನ್ನು ತಪ್ಪಿಸಲು ಬಳಸಲಾಗುತ್ತಿದೆ ಎಂದು ಅಮೆರಿಕ ಹೇಳುವ ಹಡಗುಗಳು ಹಾಗೂ ಜಾಲಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿದೆ.
ರಷ್ಯಾದ ಇಂಧನ ಮಾರಾಟದಿಂದ ದೊರೆಯುವ ಆದಾಯವನ್ನು ಕಡಿಮೆ ಮಾಡುವ ಮೂಲಕ ಮಾಸ್ಕೊ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಆರ್ಥಿಕ ಸಾಮರ್ಥ್ಯವನ್ನು ಕುಗ್ಗಿಸಲು ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ಹಲವು ಹಂತದ ನಿರ್ಬಂಧಗಳನ್ನು ಈಗಾಗಲೇ ಜಾರಿಗೊಳಿಸಿವೆ.
೨೦೨೨ರಲ್ಲಿ ರಷ್ಯಾಉಕ್ರೇನ್ ಯುದ್ಧ ಆರಂಭವಾದ ಬಳಿಕ ಭಾರತ ರಷ್ಯಾದಿಂದ ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುವ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತದ ಪಾಲಿಗೆ ರಷ್ಯಾದ ತೈಲವು ದೇಶದ ಇಂಧನ ಅಗತ್ಯ, ಆಮದು ವೆಚ್ಚ ಮತ್ತು ಇಂಧನ ಭದ್ರತೆಯೊಂದಿಗೆ ನೇರವಾಗಿ ಸಂಬಂಧ ಹೊಂದಿದೆ.
ಅಮೆರಿಕದ ಪ್ರಸ್ತಾವಿತ ಕಾನೂನು ಈ ವ್ಯಾಪಾರ ಸಂಬಂಧದ ಮೇಲೆ ಹೊಸ ಒತ್ತಡವನ್ನು ಸೃಷ್ಟಿಸುವ ಸಾಧ್ಯತೆ ಹೊಂದಿದೆ. ಭಾರತವು ತನ್ನ ಇಂಧನ ಖರೀದಿ ನಿರ್ಧಾರಗಳು ದೇಶದ ಇಂಧನ ಭದ್ರತೆ, ಗ್ರಾಹಕರ ಹಿತಾಸಕ್ತಿ ಮತ್ತು ಆರ್ಥಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾಗುತ್ತವೆ ಎಂದು ಹೇಳಿಕೊಂಡಿದೆ.
ಮಸೂದೆ ಕಾನೂನಾಗಿ, ಅದರಡಿ ಭಾರತವನ್ನು ಗುರಿಯಾಗಿಸಿಕೊಂಡು ಹೆಚ್ಚುವರಿ ಸುಂಕ ಜಾರಿಯಾದರೆ, ಅಮೆರಿಕ ಮಾರುಕಟ್ಟೆಗೆ ಭಾರತದ ರಫ್ತು ಮಾಡುವ ಕಂಪನಿಗಳಿಗೆ ಹೆಚ್ಚಿನ ವೆಚ್ಚ ಎದುರಾಗುವ ಸಾಧ್ಯತೆ ಇದೆ. ವಿಶೇಷವಾಗಿ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಕೈಗಾರಿಕಾ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ಔಷಧ, ಜವಳಿ, ರತ್ನಾಭರಣ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪರಿಣಾಮದ ಪ್ರಶ್ನೆ ಉದ್ಭವಿಸಬಹುದು.
ಆದರೆ ಯಾವುದೇ ಅಂತಿಮ ಪರಿಣಾಮವನ್ನು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ, ಏಕೆಂದರೆ ಮೊದಲು ಹೌಸ್ನ ಅಂತಿಮ ಮತದಾನ, ನಂತರ ಕಾನೂನಿನ ಅಂತಿಮ ರೂಪ ಮತ್ತು ಆ ಬಳಿಕ ಅಧ್ಯಕ್ಷೀಯ ಕ್ರಮಗಳು ನಿರ್ಧಾರವಾಗಬೇಕಿದೆ.
ಹೌಸ್ನಲ್ಲಿ ಮಸೂದೆ ಅಂಗೀಕಾರವಾದರೆ ಅದು ಮುಂದಿನ ಕಾನೂನು ಪ್ರಕ್ರಿಯೆಗೆ ಸಾಗುತ್ತದೆ. ಅಂತಿಮವಾಗಿ ಕಾನೂನಾಗಿ ಜಾರಿಯಾದ ನಂತರವೂ ಭಾರತಕ್ಕೆ ಶೇ.೧೦೦ ಸುಂಕ ಸ್ವಯಂಚಾಲಿತವಾಗಿ ಜಾರಿಯಾಗುವುದಿಲ್ಲ. ಅಮೆರಿಕ ಅಧ್ಯಕ್ಷರು ಆ ಅಧಿಕಾರವನ್ನು ಬಳಸುತ್ತಾರೆಯೇ, ಯಾವ ದೇಶಗಳ ಮೇಲೆ ಬಳಸುತ್ತಾರೆ, ಯಾವ ಷರತ್ತುಗಳನ್ನು ಅನ್ವಯಿಸುತ್ತಾರೆ ಮತ್ತು ಅಂತಿಮ ಕಾನೂನಿನಲ್ಲಿ ಯಾವ ವಿನಾಯಿತಿಗಳು ಇರುತ್ತವೆ ಎಂಬುದರ ಮೇಲೆ ಪರಿಣಾಮ ಅವಲಂಬಿತವಾಗಿರುತ್ತದೆ.
ಹೀಗಾಗಿ ಸೆ.೧೬ರ ಬೆಳವಣಿಗೆಯ ಪ್ರಮುಖ ಅರ್ಥವೆಂದರೆ: ಭಾರತದ ಮೇಲೆ ಶೇ.೧೦೦ ಸುಂಕ ವಿಧಿಸಲಾಗಿದೆ ಎಂಬುದಲ್ಲ; ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಅಂತಹ ಸುಂಕ ವಿಧಿಸುವ ವ್ಯಾಪಕ ಅಧಿಕಾರವನ್ನು ಅಮೆರಿಕ ಅಧ್ಯಕ್ಷರಿಗೆ ನೀಡುವ ಕಾನೂನು ಪ್ರಕ್ರಿಯೆ ನಿರ್ಣಾಯಕ ಹಂತ ತಲುಪಿದೆ.
































