Home Lead News ಯುಪಿಐಗೆ ಶುಲ್ಕ ಆಕ್ರೋಶ

ಯುಪಿಐಗೆ ಶುಲ್ಕ ಆಕ್ರೋಶ

ಬೆಂಗಳೂರು.ಸೆ.೧೬ – ಎರಡು ಸಾವಿರ ರೂಪಾಯಿಗಿಂತ ಮೇಲ್ಪಟ್ಟ ವರ್ತಕರ ಯುಪಿಐ ವಹಿವಾಟುಗಳ ಮೇಲೆ ಶೇ. ೦.೪ ರಷ್ಟು ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.


ಗ್ರಾಹಕರಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ವಿಪಕ್ಷ ಕಾಂಗ್ರೆಸ್ ಇದನ್ನು ಜನಸಾಮಾನ್ಯರ ಲೂಟಿ ಎಂದು ಕರೆದರೆ, ಬಿಜೆಪಿ ಇದನ್ನು ಕಾಂಗ್ರೆಸ್‌ನ ಸುಳ್ಳಿನ ಪ್ರಚಾರ ಎಂದು ತಿರುಗೇಟು ನೀಡಿದೆ.


ಶೂನ್ಯ ಎಂಬಿಆರ್ ವ್ಯವಸ್ಥೆ ಕೈಬಿಟ್ಟು ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಬೇಕೆಂಬ ಅಮೆರಿಕದ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.


ಅಮೆರಿಕದ ಕ್ರೆಡಿಟ್/ಡೆಬಿಟ್ ಕಾರ್ಡ್ ಸೇವೆ ಒದಗಿಸುವ ಕಂಪನಿಗಳು ಯುಪಿಐ ಜೊತೆ ಸ್ಪರ್ಧಿಸಲು ಅನುವು ಮಾಡಿಕೊಡುವ ಉದ್ದೇಶದಿಂದಲೇ ವರ್ತಕರ ಯುಪಿಐ ವಹಿವಾಟುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ ಎಂದು ಕಾಂಗ್ರೆಸ್ ದೂರಿದೆ.


ಯುಪಿಐ ವಹಿವಾಟಗಳ ಮೇಲೆ ಸುಂಕ ವಿಧಿಸುವ ಮೂಲಕ ಪ್ರಧಾನಿ ಮೋದಿಯವರು ಟ್ರಂಪ್ ಅವರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಡೆಬಿಟ್ ಕಾರ್ಡ್ ಎಂಬಿಆರ್ ಮೇಲೆ ಶೇ. ೦.೪ ರಷ್ಟು ಶುಲ್ಕ ಇದ್ದು ಅದನ್ನೇ ಯುಪಿಐ ಪಾವತಿ ಮೇಲೂ ವಿಧಿಸುವ ಮೂಲಕ ಯುಪಿಐಗೆ ಸ್ಪರ್ಧೆ ಒಡ್ಡಲೂ ಕೇಂದ್ರ ಸರ್ಕಾರ ಅನುವು ಮಾಡಿಕೊಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.


ಅಮೆರಿಕ ಕಂಪನಿಗಳ ಒತ್ತಡಕ್ಕೆ ಮೋದಿ ಶರಣು :


ಕೇಂದ್ರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ,ಮೋದಿ ಸರ್ಕಾರವು ಉಚಿತ ಯುಪಿಐ ವ್ಯವಸ್ಥೆಯ ಭರವಸೆಯನ್ನು ಮುರಿದಿದೆ.ಅಮೆರಿಕದ ಪ್ರಭಾವಿ ಕಂಪನಿಗಳ ಒತ್ತಡಕ್ಕೆ ಮಣಿದು ಹಿಂಬಾಗಿಲಿನಿಂದ ಶುಲ್ಕ ವಿಧಿಸಲು ದಾರಿ ಮಾಡಿಕೊಡಲಾಗಿದೆ ಎಂದು ಆರೋಪಿಸಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ,ಮೋದಿ ಸರ್ಕಾರದ ಲೂಟಿ ಈಗ ದೇಶದ ಕೋಟ್ಯಂತರ ಡಿಜಿಟಲ್ ಬಳಕೆದಾರರ ಜೇಬಿಗೆ ಕತ್ತರಿ ಬೀಳುತ್ತಿದೆ. ಸಂಸತ್ತಿನಲ್ಲಿ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿ, ಈಗ ದಿಢೀರನೆ ಅಧಿಸೂಚನೆ ಹೊರಡಿಸಿರುವುದು ನಂಬಿಕೆ ದ್ರೋಹ ಎಂದಿದ್ದಾರೆ.


ಕಾಂಗ್ರೆಸ್‌ನಿಂದ ನಕಲಿ ಸುದ್ಧಿ ಪ್ರಸಾರ :


ಕಾಂಗ್ರೆಸ್ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಬಿಜೆಪಿ,ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಎಂದು ಹೇಳಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ,ಕಾಂಗ್ರೆಸ್ ಮತ್ತೊಮ್ಮೆ ಸುಳ್ಳಿನ ಅಂಗಡಿ ತೆರೆದಿದೆ.ದೇಶದ ಶೇ. ೯೬ ರಷ್ಟು ಯುಪಿಐ ವಹಿವಾಟುಗಳು ೨,೦೦೦ ಒಳಗಿರುತ್ತವೆ.ಇವುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯ ಗ್ರಾಹಕರಿಗೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆಗೆ ೧ ಶುಲ್ಕವೂ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಡಿಜಿಟಲ್ ಇಂಡಿಯಾದ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್ ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಸುಳ್ಳು ಸುದ್ದಿ ಹರಡುತ್ತಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟೀಕಿಸಿದ್ದಾರೆ.


೨,೦೦೦ ಮೇಲ್ಪಟ್ಟ ವಹಿವಾಟಿಗೆ ಶೇ. ೦.೪ ಶುಲ್ಕ :


ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಯುಪಿಐ ಹೊಸ ನಿಯಮದ ಅಸಲಿ ತಾಂತ್ರಿಕ ಚೌಕಟ್ಟು ಹಾಗೂ ಮಚೆಂಟ್ ಡಿಸ್ಕೌಂಟ್ ರೇಟ್ ಲೆಕ್ಕಾಚಾರದ ವಿವರಗಳು ಹೊರಬಿದ್ದಿವೆ.ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಬ್ಯಾಂಕಿಂಗ್ ತಜ್ಞರು ಈ ಹೊಸ ತಾಂತ್ರಿಕ ನಿಯಮಗಳನ್ನು ಸ್ಪಷ್ಟಪಡಿಸಿದ್ದಾರೆ.


ಏನಿದು ಶೇ. ೦.೪ ಎಂಡಿಆರ್ ನಿಯಮ? :


ಮಚೆಂಟ್ ಡಿಸ್ಕೌಂಟ್ ರೇಟ್ ಎಂದರೆ ಗ್ರಾಹಕರು ಡಿಜಿಟಲ್ ಪಾವತಿ ಮಾಡಿದಾಗ,ಆ ವಹಿವಾಟನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಬ್ಯಾಂಕುಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ವ್ಯಾಪಾರಿಗಳಿಂದ ವಸೂಲಿ ಮಾಡುವ ಕಮಿಷನ್ ಆಗಿದೆ. ಹೊಸ ತಾಂತ್ರಿಕ ಅಧಿಸೂಚನೆಯ ಪ್ರಕಾರ,ಕೇವಲ ೨,೦೦೦ ಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಮಾತ್ರ ಶೇ. ೦.೪ ರಷ್ಟು ಎಂಡಿಆರ್ ಅನ್ವಯಿಸುತ್ತದೆ.


ಈ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬ್ಯಾಂಕುಗಳಿಗೆ ಕಾಲಾವಕಾಶ ನೀಡಲಾಗಿದ್ದು, ಈ ನಿಯಮವು ಅಕ್ಟೋಬರ್ ೧೫ ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ.