Home ಮುಖಪುಟ ಸುದ್ದಿ ಮಂಡ್ಯ, ರಾಮನಗರದಲ್ಲಿ ಪ್ರತಿಭಟನೆ ಕಾವು

ಮಂಡ್ಯ, ರಾಮನಗರದಲ್ಲಿ ಪ್ರತಿಭಟನೆ ಕಾವು

ಬೆಂಗಳೂರು.ಆ.೧೩ : ಕಾವೇರಿ ನದಿ ನೀರು ಬಿಡುಗಡೆ ಸಂಬಂಧ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಖಂಡಿಸಿ ಮಂಡ್ಯ, ಮೈಸೂರು, ರಾಮನಗರ, ಹಾಸನ ಜಿಲ್ಲೆಗಳಲ್ಲಿ ವಿವಿಧ ವಿಶಿಷ್ಟ ಪ್ರತಿಭಟನೆಗಳು ಹಾಗೂ ರಸ್ತೆ ತಡೆಗಳು ನಡೆದಿವೆ.


ಮಂಡ್ಯ ನಗರದಲ್ಲಿ ಕರ್ನಾಟಕ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ನಗರದ ಪ್ರಮುಖ ವಹಿವಾಟು ಕೇಂದ್ರವಾಗಿರುವ ಪೇಟೆ ಬೀದಿಯ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ವರ್ತಕರು ಬೆಂಬಲ ಸೂಚಿಸಿದರು.


ಕನ್ನಡ ಸೇನೆಯ ಕಾರ್ಯಕರ್ತರು ನಗರದ ಸಂಜಯ್ ವೃತ್ತದಲ್ಲಿ ಖಾಲಿ ಮಡಿಕೆ ಹಾಗೂ ಹುರುಳಿ ಕಾಳು ಹಿಡಿದು ಖಾಲಿ ಕೊಡ ಭಾಗ್ಯ ಕೊಟ್ಟ ಸರ್ಕಾರ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿ ಖಾಲಿ ಮಡಿಕೆ ಚಳವಳಿ ನಡೆಸಿದರು. ಸಾರ್ವಜನಿಕರು ಹಾಗೂ ವರ್ತಕರಲ್ಲಿ ಬಂದ್‌ಗೆ ಬೆಂಬಲ ಕೋರಿ ಕನ್ನಡಪರ ಕಾರ್ಯಕರ್ತರು ನಗರಾದ್ಯಂತ ಬೈಕ್ ರ್‍ಯಾಲಿ ನಡೆಸಿದರು.


ಅಲ್ಲದೆ, ರಾಮನಗರದಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದ ಕನ್ನಡಪರ ಹೋರಾಟಗಾರರು ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿಯನ್ನು ತಡೆಯಲು ಯತ್ನಿಸಿದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು. ಪ್ರಮುಖ ಐಜೂರು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಖಾಲಿ ಬಿಂದಿಗೆಗಳನ್ನು ಹಿಡಿದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.


ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿಭಟನೆಗೆ ಇಳಿದ ಕನ್ನಡ ಸಂಘಟನೆಗಳ ಪ್ರಮುಖ ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದರು. ಹಾಸನ ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟು ಹಾಗೂ ಸಾರ್ವಜನಿಕ ಜನಜೀವನ ಎಂದಿನಂತಿತ್ತು. ದಾವಣಗೆರೆಯಲ್ಲಿ ಪ್ರತಿಭಟನೆ ಕೇವಲ ಸಾಂಕೇತಿಕ ಧರಣಿಗೆ ಸೀಮಿತವಾಗಿತ್ತು.ಚಿತ್ರದುರ್ಗದಲ್ಲಿ ಸ್ಥಳೀಯ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡದಿರುವುದರಿಂದ ಯಾವುದೇ ವ್ಯತ್ಯಯ ಉಂಟಾಗಲಿಲ್ಲ.