
ತಾಳಿಕೋಟೆ, ವಿಜಯಪುರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ರಾಜ್ಯ ಸರ್ಕಾರ ಜಿಲ್ಲೆಯ ಕೇವಲ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಉಳಿದ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಬೊಮ್ಮನಹಳ್ಳಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಮಡುಸಾಹುಕಾರ ಬಿರಾದಾರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿದೆ. ಮುಂಗಾರು ಮಳೆಯನ್ನೇ ನಂಬಿಕೊAಡು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಹಣ ವ್ಯಯಿಸಿದ್ದರು. ಆದರೆ ಬಿತ್ತನೆಯ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ ರೈತರು ಬಿತ್ತನೆಗೆ ಮಾಡಿರುವ ವೆಚ್ಚವನ್ನೂ ಮರಳಿ ಪಡೆಯಲಾಗದಂತಹ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯಗಳ ಕೊರತೆಯಿದ್ದು, ರೈತರು ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಿದ್ದಾರೆ. ಕೆಲವೆಡೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಒದಗಿಸುವುದೂ ಸವಾಲಾಗುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಬರಪೀಡಿತ ತಾಲೂಕುಗಳ ಆಯ್ಕೆಯಲ್ಲಿ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೇ ಮನಸ್ಸಿಚ್ಚೆಯಂತೆ ಬರಪಿಡಿತ ತಾಲೂಕು ಪಟ್ಟಿ ಸಿದ್ದಪಡಿಸಿ ಬಿಡುಗಡೆಗೊಳಿಸಿರುವದು ರೈತರಿಗೆ ಕೆರಳಿಸುವಂತೆ ಮಾಡಿದೆ ಬರಪೀಡಿತ ತಾಲೂಕುಗಳ ಘೋಷಣೆಯಲ್ಲಿ ಅಧಿಕಾರಿಗಳಿಂದ ಯಾವುದೇ ಲೋಪವಾಗಿದ್ದರೆ ಅದನ್ನು ರಾಜ್ಯ ಸರ್ಕಾರ ಕೂಡಲೇ ಪರಿಶೀಲಿಸಿ ಸರಿಪಡಿಸಬೇಕು. ಜಿಲ್ಲೆಯ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಮಳೆ ಪ್ರಮಾಣ, ಬೆಳೆ ಹಾನಿ, ಜಲಮೂಲಗಳ ಸ್ಥಿತಿ ಹಾಗೂ ರೈತರ ನಷ್ಟವನ್ನು ಪರಿಗಣಿಸಿ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಮಡುಸಾಹುಕಾರ ಬಿರಾದಾರ ಅವರು ಒತ್ತಾಯಿಸಿದ್ದಾರೆ.
ಪ್ರತಿ ಎಕರೆಗೆ ೫೦ ಸಾವಿರ ಪರಿಹಾರಕ್ಕೆ ಆಗ್ರಹ
ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ತಕ್ಷಣ ಏಕರೆಗೆ ೫೦ ಸಾವಿರ ಪರಿಹಾರ ನೀಡಬೇಕು. ಇದರ ಜೊತೆಗೆ ರೈತರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟದಿಂದ ಆದಾಯ ಕಳೆದುಕೊಂಡಿರುವ ರೈತರಿಗೆ ಸಾಲದ ಕಂತುಗಳನ್ನು ಪಾವತಿಸುವುದು ಕಷ್ಟವಾಗುತ್ತಿದೆ.
ವಾರದಲ್ಲಿ ಹೋರಾಟದ ಎಚ್ಚರಿಕೆ
ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಮರುಪರಿಶೀಲಿಸಬೇಕು. ಅಧಿಕಾರಿಗಳ ವರದಿಯನ್ನು ಪುನರ್ ಪರಿಶೀಲಿಸಿ, ನೈಜ ಬರ ಪರಿಸ್ಥಿತಿಯ ಆಧಾರದ ಮೇಲೆ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಈ ವಿಷಯವಾಗಿ ಜಿಲ್ಲೆಯ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ತರುವಂತಹ ಕೆಲಸ ಮಾಡಬೇಕು ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಮುಂದಿನ ಒಂದು ವಾರದೊಳಗೆ ರೈತರನ್ನು ಸಂಘಟಿಸಿ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

































