
ಧಾರವಾಡ, ಸೆ. ೩: ಒಂಬತ್ತು ವಾರ್ಡ್ಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ತಮ್ಮ ಕ್ಷೇತ್ರದಲ್ಲಿ ಸುಮಾರು ರೂ. ೧೧೦ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯುಜಿಡಿ ಕಾಮಗಾರಿಗೆ ರೂ. ೩೦ ಕೋಟಿ, ಕಾಂಕ್ರೀಟ್ ರಸ್ತೆಗಳಿಗೆ ರೂ. ೪೦ ಕೋಟಿ, ಕುಡಿಯುವ ನೀರಿನ ಯೋಜನೆಗಳಿಗೆ ರೂ. ೩೬ ಕೋಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ. ಮುರುಘಾಮಠದ ಬಳಿಯ ಸ್ಮಶಾನದಲ್ಲಿ ಆಧುನಿಕ ವಿದ್ಯುತ್ ಶವಸಂಸ್ಕಾರ ಘಟಕ ಸ್ಥಾಪನೆಗೂ ಅನುದಾನ ನೀಡಲಾಗಿದೆ. ಇದರ ಹೊರತಾಗಿಯೂ ವಿವಿಧ ಯೋಜನೆ ಹಾಗೂ ಅನುದಾನಗಳ ಮೂಲಕ ಸುಮಾರು ೭೦ ರಿಂದ ೮೦ ಕೋಟಿ ರೂಪಾಯಿ ಮೊತ್ತದ ಹೆಚ್ಚುವರಿ ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಅವರು ಹೇಳಿದರು.
ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಮೃತ ಮಹೋತ್ಸವ ಸಭಾಂಗಣದಲ್ಲಿ ಧಾರವಾಡ-೭೧ ವಿಧಾನಸಭಾ ಮತಕ್ಷೇತ್ರದ ಪಾಲಿಕೆಯ ವಾರ್ಡುಗಳ, ವಿವಿಧ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ, ಜಿಲ್ಲಾ ಪ್ರಾಧಿಕಾರದ ಸದಸ್ಯ ಅರವಿಂದ ಏಗನಗೌಡರ, ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಬಸವರಾಜ ಹುಬ್ಬಳ್ಳಿ, ಮುಖ್ಯ ಅಧಿಕ್ಷಕ ಅಭಿಯಂತರರು ವಿಜಯ ಕುಮಾರ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.























