
ಬೆಂಗಳೂರು,ಅ.೧೦- ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಗರದಾದ್ಯಂತ ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಪೊಲೀಸರು ನಿನ್ನೆ ರಾತ್ರಿಯಿಡೀ ವಿಶೇಷ ಕಾರ್ಯಾಚರಣೆ ನಡೆಸಿ ದಾಳಿ ಕೈಗೊಂಡಿದ್ದಾರೆ.
ನಗರದ ವಿವಿಧೆಡೆ ಏಕಕಾಲದಲ್ಲಿ ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಲಾಗಿದೆ. ಅಪ್ರಾಪ್ತರಿಗೆ ಪ್ರವೇಶ ನೀಡುವುದು, ನಿಗದಿತ ಅವಧಿ ಮೀರಿದ ಬಳಿಕವೂ ವ್ಯವಹಾರ ನಡೆಸುವುದು ಹಾಗೂ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.
ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ನಗರದ ಎಲ್ಲಾ ವಿಭಾಗಗಳ ಡಿಸಿಪಿಗಳು ಸೇರಿದಂತೆ ಸುಮಾರು ೮ ಸಾವಿರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಆನಂದರಾವ್ ಸರ್ಕಲ್, ಕೋರಮಂಗಲ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿರುವ ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಪಬ್, ಕ್ಲಬ್ ಬಂದ್ :
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಹಲವು ಬಾರ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಅಲ್ಲಿದ್ದ ಗ್ರಾಹಕರನ್ನು ಹೊರಗೆ ಕಳುಹಿಸಲಾಯಿತು. ನಿಯಮಗಳ ಉಲ್ಲಂಘನೆ ಹಾಗೂ ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದರು.
ಜೋಡಿಗಳಿಗೆ ಶಾಕ್!
ಪಬ್‌ಗಳಲ್ಲಿ ಪಾರ್ಟಿ ಮಾಡುತ್ತಿದ್ದ ಜೋಡಿಗಳಿಗೆ ಪೊಲೀಸ್ ಅಧಿಕಾರಿಗಳ ದಿಢೀರ್ ಪ್ರವೇಶದಿಂದ ಆತಂಕ ಎದುರಾಯಿತು. ಕೆಲವರು ಸ್ಥಳದಿಂದ ಹೊರಹೋಗಲು ಪ್ರಯತ್ನಿಸಿದರೆ, ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಪಡೆದ ಬಳಿಕ ಗ್ರಾಹಕರನ್ನು ಒಬ್ಬೊಬ್ಬರಾಗಿ ಹೊರಗೆ ಕಳುಹಿಸಿದರು.
ಲೇಡೀಸ್ ಪಬ್ ದಾಳಿ:
ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಲೇಡೀಸ್ ಪಬ್‌ಗಳ ಮೇಲೂ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಕೈಗೊಂಡರು. ಅಪ್ರಾಪ್ತರಿಗೆ ಪ್ರವೇಶ ನೀಡಲಾಗುತ್ತಿದೆಯೇ, ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆಯೇ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ಅಪ್ರಾಪ್ತ ಹೆಣ್ಣುಮಕ್ಕಳ ಪ್ರವೇಶದ ಬಗ್ಗೆಯೂ ವಿಶೇಷವಾಗಿ ಪರಿಶೀಲನೆ ನಡೆಸಲಾಯಿತು.
ರಸ್ತೆಗಳಲ್ಲಿ ನಾಕಾಬಂದಿ:
ಪಬ್‌ಗಳು ಮತ್ತು ಬಾರ್‌ಗಳ ಮೇಲಿನ ದಾಳಿಯ ಜತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ನಡೆಸಲಾಯಿತು. ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪತ್ತೆಹಚ್ಚಲು ಡ್ರಂಕ್ ಆಂಡ್ ಡ್ರೈವ್ ತಪಾಸಣೆ ಕೈಗೊಳ್ಳಲಾಯಿತು.
ಬಾರ್‌ಗಳಲ್ಲಿ ನಡೆಯಬಹುದಾದ ಅಕ್ರಮ ಚಟುವಟಿಕೆಗಳು, ಅಪ್ರಾಪ್ತರಿಗೆ ಮದ್ಯಪಾನಕ್ಕೆ ಅವಕಾಶ ನೀಡುವ ಪ್ರಕರಣಗಳು ಹಾಗೂ ನಿಗದಿತ ಸಮಯದ ಬಳಿಕವೂ ವ್ಯವಹಾರ ಮುಂದುವರಿಸುವ ಉಲ್ಲಂಘನೆಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.























