
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೩: ನಾಟಕಗಳು ಕೇವಲ ಮನರಂಜನೆಯ ಮಾಧ್ಯಮಗಳಲ್ಲ. ಅವು ಸಮಾಜದ ಕನ್ನಡಿ ಇದ್ದಂತೆ. ಜನರ ಆಲೋಚನೆಗೆ ಹೊಸ ದಾರಿ ತೋರಿಸಿ, ಸಮಾಜದಲ್ಲಿ ಜಾಗೃತಿ ಮೂಡಿಸಲು ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿಶ್ರಾಂತ ಪ್ರಾಚಾರ್ಯ ಬಿ.ಎಂ. ಅಜೂರ ಹೇಳಿದರು.
ನಗರದ ಕಂದಗಲ್ ಶ್ರೀ ಹನಮಂತರಾಯ ರಂಗಮAದಿರದಲ್ಲಿ ಸೋಮವಾರ ಸಂಜೆ ರಂಗಾಯಣ ಕಲಬುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕಾಲಚಕ್ರ’ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕಗಳು ಮನುಷ್ಯನ ಭಾವನೆಗಳು, ಸಾಮಾಜಿಕ ಸಮಸ್ಯೆಗಳು ಹಾಗೂ ಸಾಂಸ್ಕೃತಿಕ ಪರಂಪರೆಗಳನ್ನು ಪ್ರತಿಬಿಂಬಿಸುತ್ತವೆ. ಸಮಾಜದ ಆಗುಹೋಗುಗಳನ್ನು ಜನರ ಮುಂದಿಡುವ ಮೂಲಕ ಚಿಂತನೆಗೆ ಹಚ್ಚುವ ಕೆಲಸವನ್ನು ರಂಗಭೂಮಿ ಮಾಡುತ್ತದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಭಾಗದ ಜಂಟಿ ನಿರ್ದೇಶಕ ಕಲ್ಲಪ್ಪ ಚನ್ನೂರು ಮಾತನಾಡಿ, ಗುಣಮಟ್ಟದ ನಾಟಕಗಳಿಗೆ ಇಂದಿಗೂ ಸಮಾಜದಲ್ಲಿ ಉತ್ತಮ ಮಾನ್ಯತೆ ಇದೆ. ರಂಗಭೂಮಿ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಉತ್ತಮ ವೇದಿಕೆಯಾಗಿದೆ. ಜನರಲ್ಲಿ ಚಿಂತನೆ ಹಾಗೂ ಜಾಗೃತಿ ಮೂಡಿಸುವುದೇ ನಾಟಕದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದ ಭರಾಟೆಯ ನಡುವೆಯೂ ನಾಟಕ ಕಲಾವಿದರು ವಿಚಲಿತರಾಗದೆ ಉತ್ತಮ ಪ್ರದರ್ಶನಗಳ ಮೂಲಕ ನಾಟಕ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಹೇಳಿದರು.
ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಪದಾಧಿಕಾರಿಗಳಾದ ಬಿ.ಎಸ್. ನವಲಿ, ಭಾಗೀರಥಿ ಸಿಂಧೆ, ಅಲ್ಲಮಪ್ರಭುದೇವ ಮಲ್ಲಿಕಾರ್ಜುನಮಠ, ಅರ್ಜುನ ಶಿರೂರ, ಶ್ರೀಧರ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಹೇತಾಬ ಕಾಗವಾಡ ಪ್ರಾರ್ಥಿಸಿದರು. ಶಶಿಕಲಾ ನಾಯ್ಕೋಡಿ ಗೀತಗಾಯನ ನಡೆಸಿದರು. ರಿಯಾಜ್ ಪಿಂಜಾರ ಸ್ವಾಗತಿಸಿ ಸತ್ಕರಿಸಿದರು. ಜಯಶ್ರೀ ಹಿರೇಮಠ ನಿರೂಪಿಸಿ ವಂದಿಸಿದರು.






























