
ಬೆಂಗಳೂರು, ಆ. ೧೩- ವಿಧಾನಸಭೆಯ ಸಭಾಧ್ಯಕ್ಷ ಮತ್ತು ವಿಧಾನಪರಿಷತ್‌ನ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಈ ಎರಡೂ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಕೆಯಾಗಿದೆ.
ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ಶಾಸಕ ಗದಗ ಜಿಲ್ಲೆಯ ರೋಣಾ ಕ್ಷೇತ್ರವನ್ನು ಪ್ರತಿನಿಧಿಸುವ ಜಿ.ಎಸ್. ಪಾಟೀಲ್ ಅವರು ಇಂದು ತಮ್ಮ ನಾಮಪತ್ರವನ್ನು ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಸಲ್ಲಿಸಿದರು.
ವಿಧಾನಸಭಾಧ್ಯಕ್ಷರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ಕೆ.ಹೆಚ್. ಮುನಿಯಪ್ಪ, ಮಾಜಿ ಸಚಿವ ಹೆಚ್. ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು ಉಪಸ್ಥಿತರಿದ್ದರು.
ಸಲೀಂ ಅಹಮದ್ ನಾಮಪತ್ರ ಸಲ್ಲಿಕೆ
ವಿಧಾನಪರಿಷತ್‌ನ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನ ಸಲೀಂ ಅಹಮದ್ ಅವರು ಇಂದು ತಮ್ಮ ಉಮೇದುವಾರಿಕೆಯನ್ನು ವಿಧಾನಪರಿಷತ್‌ನ ಕಾರ್ಯದರ್ಶಿ ಕಚೇರಿಯಲ್ಲಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಯತೀಂದ್ರ ಸಿದ್ಧರಾಮಯ್ಯ, ವಿಧಾನಪರಿಷತ್ ಸದಸ್ಯರಾದ ವಿನಯ್ ಕಾರ್ತಿಕ್, ನಾಗೇಂದ್ರ ಯಾದವ್, ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು
ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್‌ನ ಸಭಾಪತಿಗಳ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಈ ಎರಡು ಸ್ಥಾನಗಳಿಗೆ ಇಂದು ನಾಮಪತ್ರ ಸಲ್ಲಿಸಿರುವ ಜಿ.ಎಸ್. ಪಾಟೀಲ್ ಅವರು ವಿಧಾನಸಭಾಧ್ಯಕ್ಷರಾಗಿ ಮತ್ತು ಸಲೀಂ ಅಹಮದ್ ಅವರು ವಿಧಾನಪರಿಷತ್ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೋಯಾಗುವುದು ಬಹುತೇಕ ನಿಶ್ಚಿತ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಚನೆಯಾದ ನಂತರ ಅವರ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿದ್ದ. ಯು.ಟಿ. ಖಾದರ್ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದರಿಂದ ವಿಧಾನಸಭಾಧ್ಯಕ್ಷ ಸ್ಥಾನ ತೆರವಾಗಿದೆ. ಹಾಗೆಯೇ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಸಂಪುಟಕ್ಕೆ ಸೇರ್ಪಡೆಯಾಗಿದ್ದು, ವಿಧಾನಸಭಾಧ್ಯಕ್ಷ ಹಾಗೂ ವಿಧಾನಪರಿಷತ್‌ನ ಉಪಸಭಾಪತಿ ಎರಡೂ ಸ್ಥಾನಗಳು ತೆರವಾಗಿದ್ದು,
ನಾಳೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುತ್ತಿದೆ. ವಿಧಾನಪರಿಷತ್‌ನಲ್ಲಿ ಸಭಾಪತಿ ಹೊರಟ್ಟಿ ಅವರ ರಾಜಿನಾಮೆ ಹಾಗೂ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರ ರಾಜೀನಾಮೆಯಿಂದ ಸಭಾಪತಿ ಮತ್ತು ಉಪಸಭಾಪತಿಗಳು ಎರಡೂ ಸ್ಥಾನಗಳು ತೆರವಾಗಿದ್ದು, ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ನಾಮಪತ್ರ ಸಲ್ಲಿಸಿದ್ದು ನಾಳೆ ಅವರ ಆಯ್ಕೆ ಅವಿರೋಧವಾಗಿ ಆಗುವುದು ನಿಶ್ಚಿತ.































