ಬೀದರ್. ಆ ೨೨: ಸರ್ದಾರ್ ವಲ್ಲಭಭಾಯಿ ಪಟೇಲರ ದೃಢ ನಿರ್ಧಾರ ಹಾಗೂ ಕಠಿಣ ನಿರ್ಣಯಗಳೇ ದೇಶದ ಏಕತೆಗೆ ಬಲ ತಂದಿದ್ದು, ಅಖಂಡ ಭಾರತ ನಿರ್ಮಾಣದಲ್ಲಿ ಅವರ ಪಾತ್ರ ಅತ್ಯಂತ ಅನನ್ಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸೊಳ್ಳೊಳ್ಳಿ ಹೇಳಿದರು.
ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ನವದೆಹಲಿಯ ಸಂಸ್ಕೃತಿ ಸಚಿವಾಲಯ, ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಸಿದ್ಧೇಶ್ವರ ಕಲ್ಚರಲ್ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮದಿನೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ‍್ಯದ ನಂತರ ದೇಶದ ಎಲ್ಲಾ ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡುವುದು ಅತ್ಯಂತ ಕಠಿಣ ಕೆಲಸವಾಗಿತ್ತು. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿದ್ದ ನಿಜಾಮನ ಆಳ್ವಿಕೆಯನ್ನು ಅಂತ್ಯಗೊಳಿಸಿ, ಭಾರತದಲ್ಲಿ ವಿಲೀನಗೊಳಿಸುವಲ್ಲಿ ಪಟೇಲರ ಕಟ್ಟುನಿಟ್ಟಿನ ನಿರ್ಧಾರಗಳು ಪ್ರಮುಖವಾಗಿದ್ದವು. ಅವರ ಈ ದೃಢ ಮನಸ್ಸು ಹಾಗೂ ಅಚಲ ಸ್ವಭಾವದಿಂದಾಗಿಯೇ ಅವರನ್ನು ‘ಉಕ್ಕಿನ ಮನುಷ್ಯ’ ಎಂದು ಗೌರವಿಸಲಾಗುತ್ತಿದೆ. ಇಂದು ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಪಟೇಲರ ಸಾಧನೆಗೆ ವಿಶ್ವಮಟ್ಟದಲ್ಲಿ ಹಿಡಿದ ಕನ್ನಡಿಯಾಗಿದೆ ಎಂದು ಬಣ್ಣಿಸಿದರು. ಯುವಜನತೆಗೆ ಪಟೇಲರ ದೇಶಭಕ್ತಿ ಹಾಗೂ ಆದರ್ಶಗಳು ಸದಾ ಮಾರ್ಗದರ್ಶಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೀದರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಪ್ರೊ. ಜಗನ್ನಾಥ ಹೆಬ್ಬಾಳೆ ಅವರು ಮಾತನಾಡಿ ದೇಶದ ಸಾರ್ವಭೌಮತ್ವ ಮತ್ತು ಏಕತೆಗೆ ಧಕ್ಕೆ ತರುವಂತಹ ಅಥವಾ ದೇಶದ ವಿರುದ್ಧ ಹಗುರವಾಗಿ ಮಾತನಾಡುವವರಿಗೆ ವಿದ್ಯಾರ್ಥಿಗಳು ಮತ್ತು ಯುವಜನತೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ನಮಗೆ ಮೊದಲು ದೇಶ, ಆನಂತರ ನಾವು. ದೇಶದ ವಿಷಯ ಬಂದಾಗ ಜಾತಿ, ಮತ, ಧರ್ಮಗಳ ಭೇದಭಾವವಿರಬಾರದು ನಾವೆಲ್ಲರೂ ಭಾರತೀಯರು. ದೇಶದ ವಿರುದ್ಧ ಯಾರಾದರೂ ನಿಂದಿಸಿ ಮಾತನಾಡಿದರೆ ವಿದ್ಯಾರ್ಥಿಗಳು ಅವರಿಗೆ ತಕ್ಕ ಪಾಠ ಕಲಿಸುವ ಮೂಲಕ ಪ್ರತ್ಯುತ್ತರ ನೀಡಬೇಕು. ಇಂತಹ ವಿಷಯಗಳಲ್ಲಿ ಕಾನೂನು ಮತ್ತು ಸರ್ಕಾರಗಳು ಸಹ ದೇಶಪ್ರೇಮಿಗಳ ಪರವಾಗಿರುತ್ತವೆ ಎಂದು ಪ್ರತಿಪಾದಿಸಿದರು. ಇತಿಹಾಸವನ್ನು ಅರಿತವನು ಮಾತ್ರ ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯ ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಟೇಲರಂತಹ ಮಹಾನ್ ನಾಯಕರ ದೇಶಪ್ರೇಮ ಹಾಗೂ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೋರಿದರು.
ಬೀದರ್ ವಿಶ್ವವಿದ್ಯಾಲಯದ ನಿವೃತ್ತ ಡೀನರಾದ ಪ್ರೊ. ದೇವದಾಸ್ ತುಮಕುಂಟೆ ಮಾತನಾಡಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಾಧನೆಗಳನ್ನು ಭಾರತ ಸ್ವಾತಂತ್ರ‍್ಯ ಗಳಿಸಿದ ಸಂದರ್ಭದಲ್ಲಿ ೫೦೦ಕ್ಕೂ ಹೆಚ್ಚು ಸಂಸ್ಥಾನಗಳು ದೇಶದಲ್ಲಿದ್ದವು. ರಾಜರ ಆಳ್ವಿಕೆಯಲ್ಲಿದ್ದ ಈ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿ, ಒಂದೇ ಸೂರಿನಡಿ ತರುವುದು ಅಂದಿನ ಬಹುದೊಡ್ಡ ಸವಾಲಾಗಿತ್ತು. ಅದನ್ನು ಪಟೇಲರು ಅತ್ಯಂತ ಚಾಣಾಕ್ಷತನ ಹಾಗೂ ಧೈರ್ಯದಿಂದ ನಿರ್ವಹಿಸಿದರು. ವಿಶೇಷವಾಗಿ ಹೈದರಾಬಾದ್ ಸಂಸ್ಥಾನದ ನಿಜಾಮ ಹಾಗೂ ರಜಾಕಾರರ ಹಿಂಸಾಚಾರದಿAದ ಈ ಭಾಗದ ಜನರನ್ನು ಮುಕ್ತಗೊಳಿಸಿ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿಜವಾದ ಸ್ವಾತಂತ್ರ‍್ಯ ದೊರೆಯುವಂತೆ ಮಾಡಿದ ಶ್ರೇಯಸ್ಸು ಸರ್ದಾರ್ ಪಟೇಲರಿಗೆ ಸಲ್ಲುತ್ತದೆ. ಮೊದಲ ಗೃಹಮಂತ್ರಿಯಾಗಿ ಪಟೇಲರು ತಳೆದ ದೃಢ ನಾಯಕತ್ವ ಇಂದಿಗೂ ನಮಗೆ ಪ್ರೇರಣೆಯಾಗಿದೆ. ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಂತೆ ಪಟೇಲರ ಚರಿತ್ರೆಯನ್ನು ಇಂದಿನ ಯುವಪೀಳಿಗೆ ಹಾಗೂ ಶಾಲಾ ಮಕ್ಕಳು ತಪ್ಪದೇ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಸಂಸ್ಕೃತಿಕ ಪರಿಷತ್ತು ಸಂಸ್ಥಾಪಕ ಅಧ್ಯಕ್ಷರಾದ ಮನೋಹರ್ ನಾಯಕ್ ಸಿದ್ದಾರ್ಥ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಏಕನಾಥ್ ಸುಣಗಾರ, ಸಾಹಿತ್ಯ ಸಂಸ್ಕೃತಿ ಚಿಂತಕರಾದ ರಾಜಕುಮಾರ್ ಪಸಾರೆ, ಜಗನ್ನಾಥ್ ಪಾರ, ಶಿವಶರಣಪ್ಪ ಗಣೇಶಪೂರ, ರಾಜಕುಮಾರ ಹೆಬ್ಬಾಳೆ ಸೇರಿದಂತೆ ವಿವಿಧ ಶಾಲಾ ಕಾಲೇಜಿನ ಮಕ್ಕಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತರಾದ ನಾಲ್ಕು ವಿದ್ಯಾರ್ಥಿಗಳಿಗೆ ಸನ್ಮಾಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ೮ ಕಲಾತಂಡಗಳಿAದ ಸಂಸ್ಕೃತಿಗಳ ಕಾರ್ಯಕ್ರಮ ನಡೆಯಿತು.























