
ನವದೆಹಲಿ, ಜು. ೧೭- ಜುಲೈ ೨೦ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು,ಆಗಸ್ಟ್ ೧೩ ರವರೆಗೆ ನಡೆಯಲಿದೆ.
ಸದ್ಯ ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮಳೆಗಾಲದ ಅಧಿವೇಶನಕ್ಕಾಗಿ ಸಂಸತ್ತಿನ ಎರಡೂ ಸದನಗಳನ್ನು ಕರೆಯಲು ಅನುಮೋದನೆ ನೀಡಿದ್ದಾರೆ.
ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಐದು ಹೊಸ ಮಸೂದೆ ಮಂಡಿಸುವ ಸಾಧ್ಯತೆ ಇದ್ದು,ಕಳೆದ ಬಜೆಟ್ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳದೆ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಈ ಬಾರಿ ಸರ್ಕಾರವು ಆ ಮಸೂದೆಯನ್ನು ಮರುಮಂಡಿಸುವ ಸಾಧ್ಯತೆಯಿದೆ.
ಈ ನಡುವೆ ಜು.೨೦ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಮ ಮಂದಿರ ದೇಣಿಗೆಯಲ್ಲಿ ಅವ್ಯವಹಾರದ ಆರೋಪ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯ ವ್ಯವಸ್ಥಿತ ಕುಸಿತ, ಬೆಲೆ ಏರಿಕೆ ಮತ್ತು ವಿದೇಶಾಂಗ ನೀತಿ ಸೇರಿದಂತೆ ಹಲವು ವಿಷಯಗಳ ಕುರಿತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮುಗಿ ಬೀಳಲು ಕಾಂಗ್ರೆಸ್ ರಣವ್ಯೂಹ ರೂಪಿಸುತ್ತಿದೆ.
ಇನ್ನೊಂದು ಕಡೆ ಇಂದು ಸಭೆ ನಡೆಸಲಿರುವ ಎನ್ ಡಿಎ ಮೈತ್ರಿಕೂಟದ ನಾಯಕರು, ವಿಪಕ್ಷಗಳಿಗೆ ಎದಿರೇಟು ನೀಡುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಅಧಿವೇಶನದಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

































