
ಕಲಬುರಗಿ,ಜು.17-ನಗರದ ಎಂ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಗುರುರಾಜ ತಂದೆ ದೇವಿಂದ್ರಪ್ಪ ದಮ್ಮೂರ (38)ನನ್ನು ಬೆಂಗಳೂರು ನಗರ ಉಪ್ಪಾರಪೇಟ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ನಗರದ ಗಣೇಶ ನಗರ ನಿವಾಸಿಯಾದ ರೌಡಿಶೀಟರ್ ಗುರುರಾಜ ದಮ್ಮೂರ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಕಲಂಗಳ ಅಡಿಯಲ್ಲಿ 5 ಪ್ರಕರಣಗಳು ದಾಖಲಾಗಿವೆ. ಆರೋಪಿ ರೂಢಿಗತ ಅಪರಾಧಿಯಾಗಿದ್ದು, “ಎ” ರೌಡಿ ಎಂದು ಗುರುತಿಸಲಾಗಿದೆ. 2011 ರಿಂದ 2026ನೇ ಸಾಲಿನವರೆಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 2, ಸಿಆರ್‍ಪಿಸಿ ಅಡಿಯಲ್ಲಿ 1, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಅಡಿಯಲ್ಲಿ 2 ಪ್ರಕರಣ ಸೇರಿ 5 ಪ್ರಕರಣ ದಾಖಲಾಗಿವೆ.
ಈತ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ, ಸಾರ್ವಜನಿಕ ಸ್ಥಳದಲ್ಲಿ ದೊಂಬಿ, ಮಾರಕ ಆಯುಧ ಹೊಂದಿ ದೊಂಬಿ ಮಾಡುವುದು, ಕೊಲೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಾರಣಾಂತಿಕ ಹಲ್ಲೆ ಮಾಡುವುದು, ದಲಿತರ ಮೇಲೆ ದೌರ್ಜನ್ಯ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು, ಹಲ್ಲೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಜೀವ ಭಯ ಹಾಕುವುದು ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುತ್ತಾನೆ. ಆರೋಪಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಕಾನೂನಿನ ಬಗ್ಗೆ ಸೂಕ್ತ ಗೌರವ ಹೊಂದುವಂತೆ ಮನವರಿಕೆ ಮಾಡಿಕೊಡಲು, ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು, ಸಮಾಜ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಸುವ್ಯಸ್ಥೆಗೆ ಭಂಗ ಬರದಂತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಆರೋಪಿಯನ್ನು ಗಡಿಪಾರು ಮಾಡುವುದು ಸೂಕ್ತ ಮತ್ತು ಅನಿವಾರ್ಯವಾಗಿದೆ ಎಂದು ಎಂ.ಬಿ.ನಗರ ಪೊಲೀಸ್ ಠಾಣೆ ಪಿಐ ಖಾಜಾ ಪಾಶಾ ಅವರು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಡಿಸಿಪಿ ಶಾಲೂ ಅವರು ಆರೋಪಿಯನ್ನು ಬೆಂಗಳೂರು ನಗರ ಉಪ್ಪಾರಪೇಟ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.






























