Home ಜಿಲ್ಲೆ ಕಲಬುರಗಿ ಶಾಲಾ ವಾಹನ ಡಿಕ್ಕಿ: ಬಾಲಕ ಸಾವು

ಶಾಲಾ ವಾಹನ ಡಿಕ್ಕಿ: ಬಾಲಕ ಸಾವು

ಕಲಬುರಗಿ,ಜು.17-ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದು ಐದು ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಗರದ ಅಂಬಿಕಾ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತ ಬಾಲಕನನ್ನು ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ವೇದಾಂತ ತಂದೆ ಸಂಬಣ್ಣ (5) ಎಂದು ಗುರುತಿಸಲಾಗಿದೆ.
ಮಳಖೇಡ ಗ್ರಾಮದಿಂದ ನಗರದಲ್ಲಿರುವ ಅಜ್ಜಿಯ ಮನೆಗೆ ಬಂದಿದ್ದ ವೇದಾಂತ ರಸ್ತೆ ಬದಿಯಲ್ಲಿ ಬಹಿರ್ದೆಸೆಗೆ ಕುಳಿತಿದ್ದ ವೇಳೆ ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ತೀವ್ರ ರಕ್ತಸ್ರಾವಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸಿದ ಬಳಿಕ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಶಾಲೂ ಹಾಗೂ ಪ್ರವೀಣ್ ನಾಯಕ, ಎಸಿಪಿ ಪ್ರಭು ಡಿ.ಟಿ., ಸಂಚಾರಿ ಪೊಲೀಸ್ ಠಾಣೆ-1ರ ಪಿಐ ಶಕೀಲ್ ಅಂಗಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.