Home ಜಿಲ್ಲೆ ಕಲಬುರಗಿ ಪ್ರಭುಲಿಂಗಲೀಲೆಯ ಶರಣಾರ್ಥಿ ಸ್ತುತಿ

ಪ್ರಭುಲಿಂಗಲೀಲೆಯ ಶರಣಾರ್ಥಿ ಸ್ತುತಿ

ಕಲಬುರಗಿ,ಜು.17-ಸತ್ತವರ ಕಥೆಯಲ್ಲ, ಜನನದ ಕುತ್ತದಲಿ ಕುದಿಕುದಿದು, ಕರ್ಮದ ಕತ್ತಲೆಗೆ ಸಿಲುಕುವರು ಸೀಮೆಯ ಹೊಲಬು ತಾನಲ್ಲ, ಹೊತ್ತು ಹೋಗದೇ ಪುಂಡರಾಲಿಪ ಮತ್ತಮತಿಗಳ ಗೋಷ್ಠಿಯಲ್ಲ, ಸತ್ಯವಂತರು ನೀವು.-ವಿಜಯನಗರ ಸಾಮ್ರಾಜ್ಯದ ಕಾಲ ಬಹಳ ವೈಭವದ ಮತ್ತು ಅದ್ಭುತವಾದ ಕಾಲ. ಪ್ರೌಢದೇವರಾಯ ಶರಣ ಸಾಹಿತ್ಯಕ್ಕೆ ಹೆಚ್ವು ಒತ್ತು ಕೊಟ್ಟಿದ್ದರು. ಸರ್ವ ಮತಗಳಿಗೆ ಸಮಾನ ಗೌರವ ಕೊಡುವ ಗುಣ ಶರಣ ಸಾಹಿತ್ಯದ ಪ್ರಭಾವದಿಂದಲೇ ಅವರಿಗೆ ಬಂದಿತ್ತು. ಅಂತೆಯೇ ಅದೃಶ್ಯಕವಿ ಅವರ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ ಎಂದು ಮುದಗಲ್ ಕಲ್ಯಾಣಾಶ್ರಮದ ಮಹಾಂತ ಸ್ವಾಮಿಗಳು ಹೇಳಿದರು.
ಜಯನಗರದ ಬಸವ ಸಮಿತಿ ಅನುಭವ ಮಂಟಪದಲ್ಲಿ ಆಯೋಜಿಸಿರುವ ವಚನ ಆಷಾಢದಲ್ಲಿ ಪ್ರವಚನ ನೀಡಿದ ಅವರು, ಇದೇ 14ನೇ ಶತಮಾನದ ಕಾಲಘಟ್ಟದಲ್ಲಿ 25 ಗತಿಗಳ 1011 ನುಡಿಗಳ ಪ್ರಭುಲಿಂಗ ಲೀಲೆ ಎಂಬ ಮೇರು ಕಾವ್ಯವನ್ನು ರಚಿಸುತ್ತಾರೆ. ಆದರೆ ಎಲ್ಲಿಯೂ ಕೂಡ ಅವರು ತಮ್ಮ ವ್ಯಕ್ತಿಗತ ಪರಿಚಯದ ಉಲ್ಲೇಖ ಮಾಡಿಲ್ಲ. ಶರಣರ ಅನುಭಾವ, ವಿರಾಗಿ ಜೀವನವನ್ನು ಅಧ್ಯಯನ ಮಾಡಿ ಆ ತತ್ವವನ್ನು ಅನುಭಾವಕ್ಕೆ ತಂದು ಬರೆದ ಕೃತಿಯಾಗಿದೆ. ಆರಂಭದಲ್ಲಿ ಶರಣಾರ್ಥಿ ಸ್ತುತಿಯಿದ್ದು, ‘ಕಾಯದೊಳು ಗುರು ಲಿಂಗ ಜಂಗಮದಾಯತ’ ಎಂದು ಬಸವಣ್ಣನವರ ವಚನವನ್ನು ಪ್ರಸ್ತಾಪಿಸಿ ಶರಣರು ಅಪಾಯದ ಕೆಲಸ ತಪ್ಪಿಸಲು ಉಪಾಯದ ಮಾತುಗಳನ್ನು ಹೇಳಿದ್ದರು ಎಂದು ಬಸವಣ್ಣನವರನ್ನು ಸ್ತುತಿಮಾಡುವ ಕವಿ ಸರ್ವಜನಾಂಗಕ್ಕೂ ಅರಿವಿನ ಬೆಳಕು ಕಲ್ಪಿಸಿದ ಶರಣರು ಸಮಾಜದಲ್ಲಿ ಇಂದಿಗೂ ಕಾಣ ಬರುವ ವಿಚಿತ್ರ ವ್ಯವಸ್ಥೆ
ದೂರ ಮಾಡಿದರು ಎಂದು ಬಸವಣ್ಣನವರ ಸ್ತುತಿ ಮಾಡುತ್ತಾರೆ. ಆಯತ, ಸ್ವಾಯತ, ಸನ್ನಿಹಿತ ನಮ್ಮಲ್ಲಿ ಇವೆ. ಚಾಮರಸರ ಕಾವ್ಯಕ್ಕೆ ಅಲ್ಲಮರೇ ಪ್ರೇರಣೆ. ಪ್ರಭಾವ. ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ.ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ.ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ.ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ ಎಂದು ಹೇಳುವ ಅಲ್ಲಮಪ್ರಭುಗಳು ಬಸವಣ್ಣನೇ ಲಿಂಗಾಯತ ಧರ್ಮದ ಮೂಲ ಪುರುಷ. ಇಷ್ಟಲಿಂಗದ ಜನಕ. ಇಷ್ಟಲಿಂಗದ ವಿಳಾಸ ಬಸವಣ್ಣ. ಕಾಯ ಪಾವನ ಮಾಡಿದ ಪೂರ್ವಾಚಾರಿ ಸಂಗನಬಸವ ಎಂದು ಕೊಂಡಾಡುತ್ತಾರೆ.ಆರೇಳು ನುಡಿಯ ಮಂಗಳಾಚರಣೆಯ ಸ್ತುತಿಗೀತೆಗಳಲ್ಲಿ ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಿದೇವ, ಮರುಳ ಶಂಕರದೇವ, ಕಿನ್ನರಿ ಬೊಮ್ಮಯ್ಯ ಮುಂತಾದ ಶಿವಶರಣರಿಗೆ ಶರಣಾರ್ಥಿ ಸಲ್ಲಿಸುತ್ತಾರೆ. ಇವೆಲ್ಲವೂ
ಕೃತಿಯ ಪೀಠಿಕೆ ಇದ್ದ ಹಾಗೆ ಎಂದು ಹೇಳಿದರು.
ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ಸೇರಿದಂತೆ ಮತ್ತಿತರರು ಇದ್ದರು.